ಹಾಸನ : ಮಲೆನಾಡು ಭಾಗವಾದ ಸಕಲೇಶಪುರದ ಆಲೂರು ಮತ್ತು ಬೇಲೂರು ವ್ಯಾಪ್ತಿಯಲ್ಲಿ ಕಾಡಾನೆಗಳ ತೊಂದರೆ ಮಿತಿಮೀರುತ್ತಿದೆ. ಸರ್ಕಾರ ಕಾಡಾನೆಗಳನ್ನು ಹಿಡಿದು ಸ್ಥಳಾಂತರಿಸಲು ವಿಫಲವಾಗಿದೆ ಎಂದು ದೂರಿರುವ ರೈತರು ಇದೀಗ ತಮ್ಮ ಜಮೀನುಗಳ ಮಧ್ಯದಲ್ಲಿ ಖೆಡ್ಡಾಗಳನ್ನು ತೋಡಿ ಆನೆಗಳನ್ನು ಬೀಳಿಸಲು ಮುಂದಾಗಿದ್ದಾರೆ.
ಸಕಲೇಶಪುರ ತಾಲೂಕಿನ ಹೊಸಕೊಪ್ಪಲು ಗ್ರಾಮದಲ್ಲಿ ರೈತರು ಸ್ವಯಂಪ್ರೇರಿತವಾಗಿ ತಂತ್ರ ರೂಪಿಸಿದ್ದು ಕಾಡಾನೆಗಳನ್ನು ಖೆಡ್ಡಾಕ್ಕೆ ಬೀಳಿಸಿ ನಂತರ ಅರಣ್ಯಾಧಿಕಾರಿಗಳು ಸ್ಥಳಾಂತರಿಸಲು ಅನುಕೂಲ ಮಾಡಿ ಕೊಡುತ್ತಿದ್ದಾರೆ. ರೈತರು ಹೇಳುವ ಪ್ರಕಾರ, ಕಾಡಾನೆಗಳು ಪ್ರತಿನಿತ್ಯ ನಾವು ಬೆಳೆದ ಬೆಳೆಗಳನ್ನು ತಿಂದು ನಾಶ ಮಾಡುತ್ತಿವೆ. ಅವುಗಳ ಓಡಾಡಿದರೂ ಬೆಳೆ ಹಾಳಾಗುತ್ತಿದೆ. ಕಾಫಿ ತೋಟವಂತೂ ಸಂಪೂರ್ಣವಾಗಿ ಹಾಳಾಗುತ್ತಿವೆ ಎಂದಿದ್ದಾರೆ.
ಆನೆ ದಾಳಿ ನಡೆದು ಪ್ರಾಣ ಹಾನಿಯಾದರೂ ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಬರದೇ ಇರುವುದು ರೈತರ ಅಕ್ರೋಶಕ್ಕೆ ಕಾರಣವಾಗಿದೆ. ಸಮಸ್ಯೆಗೆ ಸರ್ಕಾರ ಶಾಶ್ವತ ಪರಿಹಾರ ದೊರಕಿಸಿಕೊಡುವಲ್ಲಿ ವಿಫಲವಾಗಿದೆ. ಈ ಹಿಂದೆಯೂ ಕಾಡಾನೆ ದಾಳಿಗೆ ಸಾಕಷ್ಟು ರೈತರು ಸಿಲುಕಿ ಪ್ರಾಣಬಿಟ್ಟಿದ್ದು, ಅರಣ್ಯ ಇಲಾಖೆ ಗಮನಹರಿಸಿಲ್ಲ. ಈ ಹಿನ್ನೆಲೆಯಲ್ಲಿ ಬೇಸತ್ತ ರೈತರು ಕಾಡಾನೆಗಳನ್ನು ಹಿಡಿಯಲು ಹೊಸ ಪರಿಹಾರ ಮಾರ್ಗ ಕಂಡುಕೊಂಡಿದ್ದಾರೆ.
ಇದನ್ನೂ ಓದಿ: ಕಾಡಾನೆ ದಾಳಿಗೆ ಚಿಕ್ಕಮಗಳೂರಲ್ಲಿ ರೈತ ಬಲಿ.. ಭೈರನ ಸೆರೆಯಿಂದ ನಿಟ್ಟುಸಿರು ಬಿಟ್ಟ ಜನರಿಗೆ ಮತ್ತೆ ಆತಂಕ