ಹಾಸನ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಆಗಸ್ಟ್ ಅಂತ್ಯಕ್ಕೆ 26.90 ಲಕ್ಷ ಮಾನವ ದಿನಗಳ ಗುರಿಗೆ 25.91 ಲಕ್ಷ ಮಾನವ ದಿನಗಳು ಸೃಷಿಯಾಗಿದ್ದು, ಶೇ. 96.31 ರಷ್ಟು ಪ್ರಗತಿ ಸಾಧಿಸಲಾಗಿದೆ.
ಜಿಲ್ಲೆಯಲ್ಲಿ ಒಟ್ಟು 2.53 ಲಕ್ಷ ಜಾಬ್‌ಕಾರ್ಡ್‌ಗಳನ್ನು ಇಲ್ಲಿಯವರೆಗೂ ವಿತರಿಸಲಾಗಿದ್ದು, ಕೂಲಿಕಾರರು ಕಳೆದ 5 ತಿಂಗಳಲ್ಲಿ ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುತ್ತಾರೆ. ಹಾಗೂ 64,738 ಕೂಲಿಕಾರರು ಕಳೆದ ಐದು ತಿಂಗಳಿಂದ ಕೆಲಸ ಮಾಡುತ್ತಿದ್ದಾರೆ ಎಂದು ಜಿಲ್ಲಾ ಪಂಚಾಯತ್ ಸಿಇಒ ಬಿ.ಎ. ಪರಮೇಶ್ ಈಟಿವಿ ಭಾರತ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಪ್ರಸಕ್ತ ಸಾಲಿನಲ್ಲಿ 1349 ಕುರಿ ದನದ ದೊಡ್ಡಿ, 1664 ಕೃಷಿ ಹೊಂಡ, 6 ಲಕ್ಷ ಗಿಡಗಳನ್ನು ವೈಯಕ್ತಿಕ ಫಲಾನುಭವಿಗಳ ಜಮೀನಿನಲ್ಲಿ ಅರಣ್ಯೀಕರಣ ಮಾಡಲಾಗಿದೆ. 2145 ತೋಟಗಾರಿಕೆ ಬೆಳೆಗಳಾದ ತೆಂಗು, ಮಾವು, ಸಪೋಟ, ದಾಳಿಂಬೆ, ಮೆಣಸು ರೇಷ್ಮೆ ಬೆಳೆ ಮತ್ತು 2827 ಬದು ನಿರ್ಮಾಣ ಕಾಮಗಾರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಅನುಷ್ಠಾನ ಮಾಡಲಾಗುತ್ತಿದೆ ಎಂದರು.
1369 ಕೆರೆ, ಕಟ್ಟೆ ಹೂಳೆತ್ತುವುದು, 56 ಕೊಳವೆ ಬಾವಿ ಜಲ ಮರುಪೂರಣ ಕಾಮಗಾರಿಗಳನ್ನು ಅನುಷ್ಠಾನ ಮಾಡಿ ಕೂಲಿ ಕಾರ್ಮಿಕರು ವಲಸೆ ಹೋಗುವುದನ್ನು ತಡೆಗಟ್ಟಲು ಅಗತ್ಯ ಕ್ರಮವಹಿಸಲಾಗಿದೆ ಎಂದು ತಿಳಿಸಿದರು.