ಹಾಸನ: ಈಗಾಗಲೇ ನಾವು ಮೂರು ತಿಂಗಳು ಲಾಕ್ಡೌನ್ ಮಾಡಿ ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ. ಪ್ರವಾಸಿಗರನ್ನೇ ನಂಬಿಕೊಂಡು ಹೋಟೆಲ್ ಉದ್ಯಮವನ್ನು ನಡೆಸುತ್ತಿದ್ದವರಿಗೆ ಏಕಾಏಕಿ ಬಂದು ಎರಗಿದ ಮಹಾಮಾರಿ ಕೊರೊನಾ ಉದ್ಯಮವನ್ನು ಅಷ್ಟೇ ಅಲ್ಲ, ಬಹುತೇಕರ ಬದುಕನ್ನೇ ಮೂರಾಬಟ್ಟೆಯಾಗಿಸಿದೆ.
ಸಣ್ಣ ಉದ್ಯಮದವರು ಸಣ್ಣ ಪ್ರಮಾಣದಲ್ಲಿ ನಷ್ಟ ಅನುಭವಿಸಿದರೆ ನಮ್ಮಂತಹ ದೊಡ್ಡ ಉದ್ಯಮದವರು ಅನುಭವಿಸಿದ್ದು ಮಾತ್ರ ಕೋಟಿಗಟ್ಟಲೇ ನಷ್ಟ. ಸರ್ಕಾರ ನಮಗೂ ಕೂಡ ಪರಿಹಾರ ನೀಡಬೇಕು. ಲಾಕ್ಡೌನ್ ಆದ ನಂತರ ಸರ್ಕಾರ ನಮ್ಮ ಉದ್ಯಮಕ್ಕೆ ಯಾವುದೇ ಪರಿಹಾರದ ಪ್ಯಾಕೇಜ್ ಘೋಷಿಸಿಲ್ಲ. ಪರಿಹಾರ ಘೋಷಣೆ ಮಾಡಿದರೆ ನಮ್ಮ ಉದ್ಯಮವನ್ನು ನಂಬಿಕೊಂಡಿರುವ ಲಕ್ಷಾಂತರ ಮಂದಿ ಕಾರ್ಮಿಕರು ಸ್ವಲ್ಪಮಟ್ಟಿಗೆ ಚೇತರಿಸಿಕೊಳ್ಳಲು ಸಹಾಯವಾಗುತ್ತದೆ. ಇದೇ ರೀತಿ ಮತ್ತೆ ಮುಂದುವರೆದರೆ ನಮ್ಮ ಉದ್ಯಮವನ್ನೇ ಸಂಪೂರ್ಣವಾಗಿ ಮುಚ್ಚುವಂತಹ ಪರಿಸ್ಥಿತಿ ಬರುತ್ತದೆ ಅಂತಾರೆ ಹಾಸನದ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಅಭಿನಂದನ್.
'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ಕೇವಲ ಜನಸಾಮಾನ್ಯರಿಗೆ ಮಾತ್ರ ಲಾಕ್ಡೌನ್ ಎಫೆಕ್ಟ್ ಆಗಿಲ್ಲ. ಪ್ರವಾಸಿಗರನ್ನೇ ನಂಬಿಕೊಂಡು ಕೋಟಿಗಟ್ಟಲೇ ಬಂಡವಾಳವನ್ನ ಹೂಡಿಕೆ ಮಾಡಿ ಲಾಕ್ಡೌನ್ ಆದಾಗಿನಿಂದ ಇಂದಿನ ತನಕ ಅವರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ವಿವಿಧ ವೃತ್ತಿಗಳನ್ನು ಮಾಡುತ್ತಿರುವ ಆಯ್ದ ಕೆಲವರಿಗಷ್ಟೇ ಸರ್ಕಾರ ಪ್ಯಾಕೇಜುಗಳನ್ನು ಘೋಷಣೆ ಮಾಡಿದೆ. ಹೋಟೆಲ್ ಉದ್ಯಮವೂ ಕೂಡ ಗುಡಿ ಕೈಗಾರಿಕೆ ರೀತಿಯಲ್ಲಿಯೇ ಇದೆ. ಇನ್ನೂ ಕೂಡ ಸಾಕಷ್ಟು ಜನರು ಇದನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ ಅವರಿಗೂ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದರೆ ಅವರ ಕುಟುಂಬಗಳು ಕೂಡ ಚೇತರಿಸಿಕೊಳ್ಳುತ್ತವೆ.
ಪ್ರತಿನಿತ್ಯ ನಾವು ಎಂದಿನಂತೆಯೇ ಗ್ರಾಹಕರು ಬರುತ್ತಾರೆ ಎಂದು ಹೋಟೆಲ್ನಲ್ಲಿ ವಿವಿಧ ಬಗೆಯ ಭಕ್ಷ್ಯ ಭೋಜನಗಳನ್ನು ತಯಾರು ಮಾಡಿರುತ್ತೇವೆ. ಆದರೆ ಜನ ಮಾತ್ರ ಮನೆಯಿಂದ ಹೊರ ಬರುತ್ತಲೇ ಇಲ್ಲ. ಅಲ್ಲದೆ ಪ್ರವಾಸಿಗರ ಸುಳಿವು ಕೂಡ ಇಲ್ಲ. ಹಾಸನದಲ್ಲಿ ಬೇಲೂರು, ಹಳೇಬೀಡು, ಶ್ರವಣಬೆಳಗೊಳ ಅಷ್ಟೇ ಅಲ್ಲದೆ, ಪಕ್ಕದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಮಂಗಳೂರು ಹೀಗೆ ನಾನಾ ಭಾಗಗಳಿಗೆ ತೆರಳುವ ಮುನ್ನ ದಣಿವು ನೀಗಿಸಿಕೊಳ್ಳಲು ಹಾಸನ ಸೂಕ್ತವೆಂದು ಒಂದು ದಿನ ಇಲ್ಲೇ ಉಳಿದು ಮರುದಿನ ಪ್ರಯಾಣ ಬೆಳೆಸುತ್ತಾರೆ. ಆದರೆ ಲಾಕ್ಡೌನ್ ತೆರೆದರೂ ಕೂಡ ಪ್ರವಾಸಿಗರು ಬಾರದಿರುವುದು ನಮ್ಮನ್ನ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ ಎಂದು ಅಭಿನಂದನ್ ಆತಂಕ ವ್ಯಕ್ತಪಡಿಸಿದರು.
ಕಳೆದ ಮೂರು ತಿಂಗಳಿಂದ ಯಾವುದೇ ವ್ಯಾಪಾರ-ವಹಿವಾಟು ಇಲ್ಲದಿದ್ದರೂ ನಾವು ನಮ್ಮ ಹೋಟೆಲ್ನಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸಂಬಳ ನೀಡುತ್ತಿದ್ದೇವೆ. ಪ್ರತಿ ತಿಂಗಳು ವಿದ್ಯುತ್ ಬಿಲ್, ನೀರಿನ ತೆರಿಗೆ, ಆದಾಯ ತೆರಿಗೆ ಹೀಗೆ ಹತ್ತು ಹಲವು ತೆರಿಗೆಳನ್ನು ಕಟ್ಟುತ್ತಿದ್ದು, ಕನಿಷ್ಠ ಇದನ್ನಾದರೂ ನಮಗೆ ಮನ್ನಾ ಮಾಡಿಕೊಟ್ಟರೆ ಹೆಚ್ಚು ಅನುಕೂಲವಾಗುತ್ತದೆ ಎಂಬುದು ಇವರ ಬೇಡಿಕೆಯಾಗಿದೆ.
ಪ್ರತಿನಿತ್ಯ ದೇಶದಲ್ಲಿ ಕೊರೊನಾ ಎಂಬ ಡೆಡ್ಲಿ ವೈರಸ್ ಹೆಚ್ಚಾಗುತ್ತಲೇ ಇದೆ. ಹೀಗಾಗಿ ಒಂದು ಕಡೆ ದೇಶದಲ್ಲಿ ಅನ್ಲಾಕ್ ಆಗಿದ್ದರೂ ಜನರು ಮಾತ್ರ ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ. ಜೀವಕ್ಕಿಂತ ನಮ್ಮ ಪ್ರವಾಸ ಮುಖ್ಯವಲ್ಲ ಎಂದು ತಿಳಿದುಕೊಂಡಿರುವ ಇವರುಗಳು ಮನೆಯಿಂದ ಹೊರಬರುತ್ತಿಲ್ಲ. ಸರ್ಕಾರ ಕೂಡ ಮುಂಜಾಗ್ರತಾ ಕ್ರಮ ಮತ್ತು ಮುಖಗವಸು ಹಾಗೂ ಸ್ಯಾನಿಟೈಸರ್ ಬಳಸಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಸೂಚನೆ ನೀಡಿದ್ದರೂ ಕೂಡ ಜನರು ಮಾತ್ರ ಆರೋಗ್ಯವೇ ಮುಖ್ಯ ಅಂತ ತಿಳಿದು ಉತ್ತಮ ಪ್ರವಾಸವನ್ನು ಕೈಬಿಟ್ಟಿದ್ದಾರೆ. ಹಿಂದಿನ ರೀತಿಯಲ್ಲಿ ಹೊರಗಿನ ಆಹಾರವನ್ನು ಸೇವಿಸದೆ ಪ್ರತಿನಿತ್ಯ ಮನೆಯಲ್ಲಿಯೇ ತಯಾರಿಸಿದ ಆಹಾರವನ್ನು ಸೇವಿಸುತ್ತಿರುವುದು ಪ್ರವಾಸೋದ್ಯಮ ಮತ್ತು ಹೋಟೆಲ್ ಉದ್ಯಮಕ್ಕೆ ಹೆಚ್ಚು ಹೊಡೆತ ಬಿದ್ದಿದೆ.