ಹಾಸನ : ಕಳೆದೆರಡು ದಿನಗಳ ಹಿಂದೆ ಚನ್ನರಾಯಪಟ್ಟಣ ತಾಲೂಕಿನ ಗೌಡಗೆರೆ ಸಹಕಾರ ಸಂಘದಲ್ಲಿ ನಡೆದ ಸಾಲಮನ್ನಾದ ಗೋಲ್ಮಾಲ್ ಪ್ರಕರಣದ ಬಗ್ಗೆ ಈಟಿವಿ ಭಾರತ್ ವಿಸ್ತೃತ ವರದಿಯನ್ನು ಪ್ರಸಾರ ಮಾಡಿತ್ತು. ಇದರಿಂದ ಎಚ್ಚೆತ್ತುಕೊಂಡ ಮಾಜಿ ಶಾಸಕ ಸಿ ಎಸ್ ಪುಟ್ಟೇಗೌಡ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ. ಇದು ಈಟಿವಿ ಭಾರತ್ ಫಲಶೃತಿಯಾಗಿದೆ.
ಜಿಲ್ಲೆಯ ಚೆನ್ನರಾಯಪಟ್ಟಣದಲ್ಲಿ ಈಟಿವಿ ಭಾರತ್ನೊಂದಿಗೆ ಮಾತನಾಡಿ ತಾಲೂಕಿನಲ್ಲಿ ನಡೆದಿರುವ ಈ ಪ್ರಕರಣ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಇಷ್ಟು ದಿನ ರೈತರ ಹೆಸರಿನಲ್ಲಿ ಕಾಣದ ಕೈಗಳು ಕಾರ್ಯದರ್ಶಿಗಳ ಮೂಲಕ ಸಾಲಮನ್ನಾದ ನೆಪದಲ್ಲಿ ಕೋಟ್ಯಂತರ ರೂಪಾಯಿಗಳನ್ನು ಹಾಳು ಮಾಡಿದ್ದಾರೆ. ರಾಜ್ಯದಲ್ಲಿನ ಎಲ್ಲಾ ಸಹಕಾರಿ ಸಂಘಗಳಲ್ಲಿ ಸಾಲಮನ್ನಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿದ್ದರು. ಚನ್ನರಾಯಪಟ್ಟಣ ತಾಲೂಕಿನಲ್ಲಿ ಅತಿ ಹೆಚ್ಚಿನ ಸಾಲ ಪಡೆದಿರುವುದು.
ಜಿಲ್ಲೆಯ ಸಹಕಾರ ಬ್ಯಾಂಕ್ ಕುಟುಂಬ ರಾಜಕಾರಣದ ಹಿಡಿತದಲ್ಲಿದ್ದು, ಬಡವರಿಗೆ ಸಲ್ಲಬೇಕಾದ ಸಾಲಮನ್ನಾವನ್ನು ಸಾಕಷ್ಟು ವರ್ಷಗಳಿಂದ ವಂಚನೆ ಮಾಡುತ್ತಾ ಬಂದಿದೆ. ಮೋದಿ ಸರ್ಕಾರದ ಡಿಜಿಟಲೀಕರಣ ಆದ ಬಳಿಕ ಈ ಪ್ರಕರಣ ಒಂದೊಂದಾಗಿ ತಿರುವು ಪಡೆಯುತ್ತಿದೆ. ಪ್ರಕರಣವನ್ನ ಬಗೆದಷ್ಟು ಮತ್ತಷ್ಟು ವಂಚಕ ಕಾರ್ಯದರ್ಶಿಗಳು ಸಿಗುತ್ತಾರೆ ಎಂದು ಆರೋಪಿಸಿದರು.
ತಾಲೂಕಿನಲ್ಲಿ ನಡೆದಿರುವ ಸಾಲಮನ್ನಾ ಹಾಗೂ ಮರು ನೋಂದಣಿ ವೇಳೆ ರೈತಾಪಿ ವರ್ಗವನ್ನು ವಂಚಿಸಿ ಸಹಕಾರಿ ಸಂಘಗಳ ಕಾರ್ಯದರ್ಶಿಗಳು ಹಣವನ್ನು ಲಪಟಾಯಿಸಿರುವುದನ್ನು ಗೌಡಗೆರೆ ಸಹಕಾರ ಸಂಘದ ಕಾರ್ಯದರ್ಶಿ ಮಂಜೇಗೌಡ ತನ್ನ ತಪ್ಪನ್ನು ಈಟಿವಿ ನ್ಯೂಸ್ ಮೂಲಕ ಒಪ್ಪಿಕೊಂಡಿದ್ದ. ಇದಾದ ಬಳಿಕ ಆ ವ್ಯಕ್ತಿ ಮೇಲೆ ಪ್ರಕರಣವನ್ನು ದಾಖಲಿಸದೆ ಆತನಿಂದ ಇಂದು 25 ಲಕ್ಷ ರೂ. ಹಣವನ್ನು ವಾಪಸ್ ಕೊಡಿಸುವ ಮೂಲಕ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನ ಮಾಡುತ್ತಿದ್ದು, ಈ ಸಂಬಂಧ ಪ್ರಕರಣದಲ್ಲಿ ಭಾಗಿಯಾಗಿರುವವರನ್ನ ಸಿಐಡಿ ತನಿಖೆ ಮೂಲಕ ಹೊರಗೆಳೆದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ತಮ್ಮ ಸಮ್ಮಿಶ್ರ ಸರ್ಕಾರವನ್ನ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಶಾಸಕರು ಹಾಗೂ ಸಚಿವರು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದು, ಈ ವೇಳೆ ಪ್ರಕರಣವನ್ನು ಸರ್ಕಾರದ ಮುಂದಿಟ್ಟರೆ ಕಸದಬುಟ್ಟಿ ಸೇರುವುದು ಖಚಿತ. ಹಾಗಾಗಿ ಇನ್ನೊಂದು ವಾರದಲ್ಲಿ ಈ ಪ್ರಕರಣದ ಸಂಬಂಧ ಮತ್ತಷ್ಟು ದಾಖಲಾತಿಗಳನ್ನು ಪಡೆದುಕೊಂಡು ಸರ್ಕಾರದ ಮುಂದಿಟ್ಟು ತನಿಖೆ ಆಗಬೇಕೆಂದು ಆಗ್ರಹಿಸುತ್ತೇನೆ ಎಂದರು.