ಹಾಸನ: ಜಿಲ್ಲೆಯಲ್ಲಿ ಕಾಡು ಪ್ರಾಣಿಗಳು ಮತ್ತು ಮಾನವನ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ಮುಂದುವರೆಯುತ್ತಲೇ ಇದೆ. ಆಹಾರ ಅರಸಿ ಬಂದ ಚಿರತೆಯೊಂದು ಹಸುವಿನ ಮೇಲೆ ದಾಳಿ ನಡೆಸಿ ಕೊಂದು ಹಾಕಿರುವ ಘಟನೆ ಹಾಸನ ತಾಲೂಕಿನ ಶಾಂತಿಗ್ರಾಮ ಸಮೀಪದ ಕಾರಿಕೆರೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಂಜೇಗೌಡ ಎಂಬುವರ ಹಸುವನ್ನು ಹೊಲದಲ್ಲಿ ಮೇಯಲು ಕಟ್ಟಿ ಹಾಕಿದ್ದ ವೇಳೆ ಚಿರತೆ ದಾಳಿ ನಡೆಸಿದೆ. ಬಳಿಕ ಯಾರೂ ಇಲ್ಲದ ಸಮಯ ನೋಡಿಕೊಂಡು ಎಳೆದುಕೊಂಡು ಹೋಗಿದೆ. ಈ ದೃಶ್ಯವನ್ನು ಗ್ರಾಮಸ್ಥರೊಬ್ಬರು ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ.
ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ಬೆಟ್ಟ ಹಾಗೂ ಚನ್ನರಾಯಪಟ್ಟಣದ ಬಳದರೆ ಬೆಟ್ಟದ ತಪ್ಪಲಿನಲ್ಲಿ ಮತ್ತು ಮಳಲಿ ದೇವಾಲಯದ ಸಮೀಪದ ಗುಡ್ಡಗಾಡು ಪ್ರದೇಶದಲ್ಲಿ ವಾಸವಾಗಿರುವ ಚರಿತೆಗಳು ಗುಡ್ಡದಲ್ಲಿ ಅಳವಡಿಸಿರುವ ಗಾಳಿ ಯಂತ್ರದ ಶಬ್ದಕ್ಕೆ ಹೊರಬರುತ್ತವೆ. ಗುಡ್ಡದ ತಪ್ಪಲಿನಲ್ಲಿ ಇತ್ತೀಚಿಗಷ್ಟೇ ಕಲ್ಲು ಗಣಿಗಾರಿಕೆ ಕೂಡ ಪ್ರಾರಂಭವಾಗಿದ್ದು, ಇದರಿಂದ ಕಾಡು ಪ್ರಾಣಿಗಳು ನಾಡಿನತ್ತ ಆಗಮಿಸುತ್ತಿವೆ. ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ ನಮ್ಮ ಭಾಗದಲ್ಲಿರುವ ಚಿರತೆಗಳನ್ನು ಹಿಡಿದು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ವ್ಯಕ್ತಿ ಕೊಂದಿದ್ದ ಚಿರತೆ ಕೊನೆಗೂ ಸೆರೆ: ತಿಂಗಳುಗಳಿಂದ ಚಳ್ಳೆಹಣ್ಣು ತಿನ್ನಿಸಿದ್ದ ಚಾಲಾಕಿ