ಹಾಸನ : ಮಾರಕ ಕೊರೊನಾ ಸೋಂಕಿನಿಂದ ಭೂಪಟದಲ್ಲಿ ಒಂದು ದೇಶ ಸಂಪೂರ್ಣ ಅಳಿಸಿ ಹೋಗುವ ಸಾಧ್ಯತೆ ಇದೆ ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ದೊಡ್ಡ ನಗರಗಳಿಗೆ ಕೊರೊನಾದಿಂದ ಅಪಾಯ ತಪ್ಪಿದ್ದಲ್ಲ. ಸಾಧು-ಸಂತರು ಜಪತಪ ನಡೆಸಿದ ಪುಣ್ಯ ಭೂಮಿ ಭಾರತಕ್ಕೆ ಕೊರೊನಾದಿಂದ ಯಾವುದೇ ತೊಂದರೆ ಇಲ್ಲ. ರೋಗ ನಿಯಂತ್ರಿಸಲಾಗದೆ ಅನೇಕರು ಪಟ್ಟ ಕಳೆದುಕೊಳ್ಳುತ್ತಾರೆ. ಜಗತ್ತಿನಲ್ಲಿ ಕೊರೊನಾ ಸೋಂಕು ಇನ್ನೂ ವ್ಯಾಪಿಸಲಿದೆ. ಈ ವ್ಯಾಧಿ ಮನುಷ್ಯರ ಪ್ರಾಣದೊಡನೆ ತಾಂಡವ ಆಡಲಿದೆ ಎಂದು ಮಠದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ಅಕ್ಷಯ ನಾಮ ತಿಥಿವರೆಗೆ ಅಬ್ಬರಿಸಿ ಮೇ ತಿಂಗಳ ವೇಳೆಗೆ ಒಂದು ಹಂತ ತಲುಪಲಿದೆ. ಪ್ರಕೃತಿಯಿಂದಲೇ ಔಷಧ ದೊರೆಯುತ್ತದೆ. ಎಲ್ಲರೂ ರಾತ್ರಿ ಮಲಗುವಾಗ ಬಿಲ್ವ ಪತ್ರೆ ಬೇವಿನ ಸೊಪ್ಪನ್ನು ಹತ್ತಿರದಲ್ಲಿ ಇಟ್ಟುಕೊಳ್ಳಬೇಕು ಹಾಗೂ ಮನೆಯಲ್ಲಿ ದೀಪ ಉರಿಯುತ್ತಿರಬೇಕು ಎಂದರು.
ಮುಂದಿನ ದಿನಗಳಲ್ಲಿ ಹೊಸ ಕಾನೂನುಗಳು ಬರುತ್ತವೆ. ಅವುಗಳ ಬಗ್ಗೆ ಅರಸ ಚಿಂತನೆ ಮಾಡಿ ಜಾರಿ ಮಾಡಿದರೆ ಒಳಿತು. ಇಲ್ಲವಾದರೆ ಪ್ರಜೆಗಳು ದಂಗೆ ಏಳಬಹುದು. ಇದರಿಂದ ಅರಸನ ಸ್ಥಾನಕ್ಕೆ ಭಂಗ ಉಂಟಾಗುವ ಲಕ್ಷಣವಿದೆ. ಕೊರೊನಾದಂಥ ಭಯಾನಕ ರೋಗಗಳು ಗಿಡ ಮರ, ಪ್ರಾಣಿಗಳಿಗೂ ಅಪ್ಪಳಿಸುತ್ತೆ ಎಂದು ಸ್ವಾಮೀಜಿ ನುಡಿದರು.
ಮನೆ ಪರಿಶೀಲನೆ ಮಾಡಲಿ: ಸಿಎಂ ಬಿ ಎಸ್ ಯಡಿಯೂರಪ್ಪ ಕುರಿತು ಮಾತನಾಡಿದ ಅವರು, ದೊರೆ ಮನೆಗೆ ವಾಸ (ಕಾವೇರಿ ನಿವಾಸಕ್ಕೆ ಹೋಗಿರುವುದನ್ನು ಮರು ಪರಿಶೀಲನೆ ಮಾಡಿದರೆ ಒಳ್ಳೆಯದು. ಆ ಮನೆಯಿಂದ ಸುಖ-ದುಃಖ ಕಾಡುತ್ತದೆ. ಮುಂದಿನ ದಿನಗಳಲ್ಲಿ ಮಳೆ ಹೆಚ್ಚಾಗುತ್ತದೆ. ಇದರಿಂದ ಗ್ರಾಮೀಣ ನಿವಾಸಿಗಳಿಗೆ ತೊಂದರೆ ಆಗಬಹುದು. ಆಶ್ವೇಜದಿಂದ ಕಾರ್ತಿಕದವರೆಗೆ ಗ್ರಾಮ ನಿವಾಸಿಗಳಿಗೆ ತೊಂದರೆ ಎಂದರು. ಮನೆಯಲ್ಲಿ ದೇವರಿಗೆ ದೀಪ ಹಚ್ಚಿ ಪ್ರಾರ್ಥನೆ ಮಾಡಿದರೆ ತೊಂದರೆ ಇಲ್ಲ. ಸರ್ಕಾರ ಕೈಗೊಳ್ಳುವ ನಿರ್ಧಾರಗಳಿಗೆ ನಾಗರಿಕರು ಸಹಕರಿಸಬೇಕು. ಇಲ್ಲವಾದರೆ ಸಾವಿಗೆ ಆಹ್ವಾನ ನೀಡಿದಂತಾಗುತ್ತದೆ. ಭೂಮಿ ಕಂಪಿಸಬಹುದು. ಪಂಚಭೂತಗಳಿಂದ ತೊಂದರೆ ಇದೆ. ಸಮುದ್ರದ ಒಡಲು ಬಿಚ್ಚಲಿದೆ ಎಂದಿದ್ದಾರೆ.