ಹಾಸನ : ಕೇರಳಾಪುರ ಹಿಂದೂ ಮಿಲ್ಟ್ರಿ ಹೋಟೆಲ್ಗಳಲ್ಲಿ ನಾಟಿ ಶೈಲಿಯ ಚಿಕನ್ ಫ್ರೈ, ಚಿಕನ್ ಡ್ರೈ, ಬಿರಿಯಾನಿ, ಸಾಂಬಾರು ಹಾಗೂ ಮುದ್ದೆ, ಮಟನ್ ಫ್ರೈ, ಡ್ರೈ, ಕೀಮಾ, ಬೋಟಿ ಫ್ರೈ, ಡ್ರೈ ಫಿಶ್ ಕರಿ, ಡ್ರೈ, ತಲೆಮಾಂಸದ ರುಚಿಗೆ ಮಾರು ಹೋಗದವರಿಲ್ಲ.
ಕುಟುಂಬ ಸದಸ್ಯರೆಲ್ಲ ಸೇರಿ ಇಲ್ಲಿ ಅಡುಗೆ ತಯಾರಿಸುತ್ತಾರೆ. ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನಲ್ಲಿ ಕೇರಳಾಪುರ ಗ್ರಾಮದಲ್ಲಿ ಪಟ್ಟಸಾಲಿ ದೇವಾಂಗ ಸಮುದಾಯಕ್ಕೆ ಸೇರಿದವರು ಹೆಚ್ಚಿದ್ದಾರೆ. ನೇಯ್ಗೆ ಇವರ ಕುಲ ಕಸುಬು. ಕೇರಳಾಪುರದ ಅನೇಕ ಕುಟುಂಬಗಳು ಕರ್ನಾಟಕದ ವಿವಿಧೆಡೆ ವಲಸೆ ಹೋಗಿ, ಕೆಲವರು ಹೋಟೆಲ್ ಉದ್ಯಮದ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ.
50 ವರ್ಷದ ಹಿಂದೆ ಮತ್ತಿಕರಿಯಪ್ಪ, ಹಂಪಯ್ಯ ಶೆಟ್ಟಿ, ಬೋರೆ ಯಲ್ಲಪ್ಪ ಶೆಟ್ಟಿ ಈ ಹೋಟೆಲ್ ಆರಂಭಿಸಿದರು. ಆಗ ಬಸ್ಗಳು ಇಲ್ಲಿ ಊಟಕ್ಕೆಂದು ಸ್ಟಾಪ್ ಕೊಡುತ್ತಿದ್ದವು. ಈ ವೇಳೆ ಊಟದ ರುಚಿ ಸವಿದ ಪ್ರಯಾಣಿಕರು ಇತರರಿಗೆ ಹೇಳತೊಡಗಿದರು. ಬಳಿಕ ಮಿಲ್ಟ್ರಿ ಹೋಟೆಲ್ ಎಲ್ಲೆಡೆ ಹೆಸರುವಾಸಿ ಆಯಿತು.
ಹಾಸನ, ಬೆಂಗಳೂರು, ಚಿಕ್ಕಮಗಳೂರು, ತುಮಕೂರು, ಮೈಸೂರು, ಮಂಡ್ಯ, ಚಾಮರಾಜನಗರ, ಶಿವಮೊಗ್ಗ ಜಿಲ್ಲೆ ಸೇರಿ ವಿವಿಧ ಕಡೆಗಳಲ್ಲಿ 280ಕ್ಕೂ ಹೆಚ್ಚು ಕೇರಳಾಪುರ ಹೋಟೆಲ್ಗಳು ಇವೆ.