ಹಾಸನ : ಕೆಂಪೇಗೌಡ ಜಯಂತಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪುಷ್ಪಾರ್ಚನೆಯೊಂದಿಗೆ ಸರಳವಾಗಿ ಆಚರಿಸಲಾಯಿತು.
ನಂತರ ಮಾತನಾಡಿದ ಅವರು, ಕೊರೊನಾ ಇರುವುದರಿಂದ ಸರಳವಾಗಿ ಕೆಂಪೇಗೌಡರ ಜಯಂತಿಯನ್ನು ಆಚರಿಸಲಾಗಿದೆ. ಪುಣ್ಯ ಪುರುಷನ ಜಯಂತಿ ಆಚರಿಸುವುದು ರಾಜ್ಯದಲ್ಲಿರುವ ಪ್ರತಿಯೊಬ್ಬನ ಕರ್ತವ್ಯ. ಜಾತಿ ಮತ್ತು ವರ್ಗ ನೋಡದೆ ಎಲ್ಲೆಲ್ಲಿ ಅವಶ್ಯಕತೆ ಇದೆ. ಅಲ್ಲಲ್ಲಿ ಕೆರೆ ಕಟ್ಟೆ ನಿರ್ಮಿಸಿ ಅನುಕೂಲ ಮಾಡಿ ಕೊಟ್ಟಿದ್ದಾರೆ. ಕೇವಲ ಬೆಂಗಳೂರಿಗೆ ಮಾತ್ರವಲ್ಲ ಹೊರ ರಾಜ್ಯದಲ್ಲೂ ಅವರ ಸಾಧನೆ ಜೀವಂತವಾಗಿದೆ ಎಂದರು.
ಬೆಂಗಳೂರಿನ ಏರ್‌ಪೋರ್ಟಿನ ಮುಂಭಾಗದ 25 ಎಕರೆ ಭೂಮಿಯಲ್ಲಿ ಒಂದು ಸುಂದರ ಉದ್ಯಾನವನ ಮತ್ತು 108 ಅಡಿ ಉದ್ದದ ಕಂಚಿನ ಪ್ರತಿಮೆ ಮಾಡಬೇಕೆಂದು ಮುಖ್ಯಮಂತ್ರಿಗಳು ನಿರ್ಧಾರ ಮಾಡಿದ್ದಾರೆ. ಕೆಂಪೇಗೌಡರ ತತ್ವ ಸಿದ್ಧಾಂತವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಸಕ ಹೆಚ್ ಕೆ ಕುಮಾರಸ್ವಾಮಿ, ಸಿ ಎನ್ ಬಾಲಕೃಷ್ಣ, ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ, ಜಿಲ್ಲಾಧಿಕಾರಿ ಆರ್. ಗಿರೀಶ್, ಎಸ್ಪಿ ಶ್ರೀನಿವಾಸ್‌ಗೌಡ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪರಮೇಶ್, ಸ್ವಾತಂತ್ರ್ಯ ಹೋರಾಟಗಾರ ಹೆಚ್ ಎಂ ಶಿವಣ್ಣ ಇತರರು ಪಾಲ್ಗೊಂಡಿದ್ದರು.