ಹಾಸನ: ಜನವರಿ ಅಥವಾ ಫೆಬ್ರವರಿ 2022ಕ್ಕೆ ಜಿಲ್ಲಾ ಮತ್ತು ತಾಲೂಕ್ ಪಂಚಾಯತ್ ಚುನಾವಣೆ ನಡೆಯಬಹುದು ಎಂದು ಸಚಿವ ಕೆ.ಎಸ್. ಈಶ್ವರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಕುಟುಂಬ ಸಮೇತರಾಗಿ ಹಾಸನಾಂಬೆ ದರ್ಶನ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಲಿಮಿಟೇಷನ್ ಮಾಡುವ ದೃಷ್ಟಿಯಿಂದ ಲಕ್ಷ್ಮಿನಾರಾಯಣ್ ನೇತೃತ್ವದಲ್ಲಿ ಸಮಿತಿ ರಚನೆಯಾಗಿದ್ದು, ಶೀಘ್ರದಲ್ಲಿಯೇ ವರದಿ ಬರಲಿದೆ. ವರದಿ ಬಂದ ಬಳಿಕ ಮುಂದಿನ ವರ್ಷ ಚುನಾವಣೆ ನಡೆಯಬಹುದು ಎಂದರು.
ಮೀಸಲಾತಿ ಪಟ್ಟಿ ಸರಿಯಿಲ್ಲ ಎಂದು 2,600 ಅರ್ಜಿಗಳು ಬಂದಿದ್ದು ಅದನ್ನು ಸರಿಪಡಿಸುವ ಕಾರ್ಯ ನಡೆಯುತ್ತಿದೆ. ನಾನು ರಾಜಕೀಯ ಬಿಟ್ಟರೂ ಪರವಾಗಿಲ್ಲ, ಮುಂದಿನ ದಿನಗಳಲ್ಲಿ ರಾಜಕೀಯ ನಾಯಕರುಗಳು ಛೀ, ಥೂ ಎಂಬ ಪದ ಬಳಕೆ ಮಾಡಬಾರದು ಎಂದು ಬಯಸುತ್ತೇನೆ. ದೇಶದಲ್ಲಿ ನಾಯಕತ್ವ, ಅಭಿವೃದ್ಧಿ ಮತ್ತು ಸಂಘಟನೆ ಯಾವುದಾದರೂ ಇದ್ರೆ ಅದು ನರೇಂದ್ರ ಮೋದಿ ನೇತೃತ್ವದಲ್ಲಿದೆ ಎಂದು ಹೇಳಿದರು.
ಕಾಂಗ್ರೆಸ್ನಲ್ಲಿ ಯಾರು ನಾಯಕತ್ವ ವಹಿಸಿಕೊಳ್ಳುವವರು ಎಂಬ ಗೊಂದಲವಿದೆ. ಕಾಂಗ್ರೆಸ್ ಎರಡು ಬಣವಾಗಿದ್ದು, ಮುಂದಿನ ವಿಧಾನಸಭೆ ಚುನಾವಣೆ ವೇಳೆಗೆ ಇಬ್ಭಾಗವಾಗಲಿದೆ. ಕಾಂಗ್ರೆಸ್ನ ಐವರು ನಾಯಕರು ಮುಖ್ಯಮಂತ್ರಿಯಾಗಬೇಕೆಂದು ಆಂತರಿಕವಾಗಿ ಕಚ್ಚಾಡುತ್ತಿದ್ದು, ಸದ್ಯದಲ್ಲೇ ಬಹಿರಂಗವಾಗಲಿದೆ ಎಂದರು.
ಪುನೀತ್ ರಾಜ್ ಕುಮಾರ್ ರಾಜ್ಯದ ಪ್ರತಿಭಾನ್ವಿತ ನಟ. ದುಡಿಮೆಯನ್ನು ಸ್ವಂತಕ್ಕೆ ಬಳಸಿಕೊಂಡಿರುವ ಚಿತ್ರನಟರೇ ಹೆಚ್ಚು. ಅಂತಹದರಲ್ಲಿ ಸಮಾಜಕ್ಕಾಗಿ ತನ್ನನ್ನು ಮೀಸಲಿಟ್ಟ ಯುವ ನಟ. ಅವರ ಕುಟುಂಬಕ್ಕೆ ಮಾತ್ರ ನೋವಾಗಿಲ್ಲ, ಇಡೀ ದೇಶವೇ ದುಃಖದಲ್ಲಿ ಮುಳುಗಿದೆ. ಅವರ ಅಗಲಿಕೆಯ ನೋವು ಬೇಗ ಮರೆಯಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಚಿವ ಈಶ್ವರಪ್ಪ ತಿಳಿಸಿದರು.