ಹಾಸನ: ಕಳೆದ 70 ವರ್ಷಗಳಿಂದ ಅಭಿವೃದ್ಧಿಯಾಗದ ದೇಶ ಪ್ರಧಾನಿ ಮೋದಿ ಬಂದ ನಂತರ ಅಭಿವೃದ್ದಿಯಾಗುತ್ತಿದೆ ಎಂದು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೇಳಿದರು. ವಿಜಯ ಸಂಕಲ್ಪ ಯಾತ್ರೆ ಹಿನ್ನೆಲೆಯಲ್ಲಿ ಜಿಲ್ಲೆಗೆ ಭೇಟಿ ನೀಡಿ ಮಾತನಾಡಿದ ಅವರು, ದೇಶಕ್ಕೆ ಇರುವುದೊಂದೇ ಪಕ್ಷ ಅದು ಭಾರತೀಯ ಜನತಾ ಪಾರ್ಟಿ ಆಗಿದೆ. ಅದನ್ನು ಗೆಲ್ಲಿಸುವ ಪಣವನ್ನ ನೀವೆಲ್ಲ ಮಾಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಕರೆ ನೀಡಿದ್ದಾರೆ.
ಮೊದಲು ಬೇರೆ ರಾಷ್ಟ್ರಗಳು ಅಭಿವೃದ್ಧಿಯನ್ನು ಹೊಂದಿದ್ದವು. ಇದೀಗ ಪ್ರಧಾನಿ ಮೋದಿ ಅವರು ಭಾರತದ ಅಭಿವೃದ್ಧಿ ಮಾಡುತ್ತಿದ್ದಾರೆ. ಕಳೆದ 70 ವರ್ಷಗಳಿಂದ ಅಭಿವೃದ್ಧಿಯಾಗದ ದೇಶ ಮೋದಿ ಬಂದ ನಂತರ ಅಭಿವೃದ್ದಿಯಾಗುತ್ತಿದೆ. ಅಲ್ಲದೇ ಇತರ ರಾಷ್ಟ್ರಗಳು ಭಾರತವನ್ನು ತಿರುಗಿ ನೋಡುವಂತೆ ಪ್ರಧಾನಿ ಮಾಡಿದ್ದಾರೆ ಎಂದು ಜೆಪಿ ನಡ್ಡಾ ಪ್ರಧಾನಿ ನರೇಂದ್ರ ಮೋದಿ ಅವರ ಗುಣಗಾನ ಮಾಡಿದರು.
ಭಾರತೀಯ ಜನತಾ ಪಕ್ಷ ಶಿಸ್ತಿನ ಪಕ್ಷ, ಎಲ್ಲರ ವಿಕಾಸವೇ ನಮ್ಮ ಗುರಿಯಾಗಿದೆ. ಕೊರೊನಾ ಬಂದ ನಂತರ ಪ್ರಪಂಚದ ಅರ್ಥವ್ಯವಸ್ಥೆ ಪೂರ್ತಿ ಹದಗೆಟ್ಟಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ದೂರ ದೃಷ್ಟಿಯಿಂದ ಭಾರತದ ಅರ್ಥ ವ್ಯವಸ್ಥೆ ಸದೃಡವಾಗಿದೆ. ಎಲ್ಲ ವರ್ಗದ ಸಮುದಾಯದ ಜನರ ಏಳಿಗೆಗೆ ನಮ್ಮ ಸರ್ಕಾರ ಕ್ರಮ ಕೈಗೊಂಡಿದೆ. ಅಲ್ಲದೇ ರೈತರ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡುವ ಮೂಲಕ ರೈತರ ನೆರವಿಗೆ ಮೋದಿ ಧಾವಿಸಿದ್ದಾರೆ ಎಂದು ನಡ್ಡಾ ಕೇಂದ್ರ ಸರ್ಕಾರದ ಸಾಧನೆಗಳನ್ನು ಬಣ್ಣಿಸಿದರು.
ರಾಜ್ಯ ಬಜೆಟ್ ಬಗ್ಗೆ ನಡ್ಡಾ ಪ್ರತಿಕ್ರಿಯೆ: ಬಜೆಟ್ ಬಗ್ಗೆ ಪ್ರತಿಕ್ರಿಯಿಸಿ, ಈ ಬಜೆಟ್ ಮಹಿಳಾ ಸಬಲೀಕರಣ ಮತ್ತು ಆರ್ಥಿಕ ಸಬಲೀಕರಣಕ್ಕೆ ಬೊಮ್ಮಾಯಿ ಮಂಡಿಸಿದ ಬಜೆಟ್ ಒತ್ತು ಕೊಟ್ಟಿದೆ. ಬಜೆಟ್ನಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಉನ್ನತ ಶಿಕ್ಷಣಕ್ಕೆ ಅನುಕೂಲವಾಗುವ ರೀತಿಯಲ್ಲಿ ಸರ್ಕಾರ ಯೋಜನೆ ರೂಪಿಸಿದೆ. ಇವತ್ತು ಎಲ್ಲಾ ಧರ್ಮದವರು ಕೂಡ ಬಸವರಾಜ ಬೊಮ್ಮಾಯಿ ಅವರನ್ನು ಕೊಂಡಾಡುತ್ತಿದ್ದಾರೆ. ಅಂತಹ ಉತ್ತಮ ಬಜೆಟ್ ಕೊಡುವಲ್ಲಿ ಕರ್ನಾಟಕದ ಮುಖ್ಯಮಂತ್ರಿ ಯಶಸ್ವಿಯಾಗಿದ್ದಾರೆ. ಅಲ್ಲದೇ 500 ಕೋಟಿ ರೂ. ವೆಚ್ಚದಲ್ಲಿ ಕೆಂಪೇಗೌಡರ ಪ್ರತಿಮೆಯನ್ನು ಬೆಂಗಳೂರಿನಲ್ಲಿ ನಮ್ಮದೇ ಸರ್ಕಾರ ನಿರ್ಮಾಣ ಮಾಡಿದೆ ಎಂದು ಇದೇ ವೇಳೆ ಪ್ರಸ್ತಾಪಿಸಿದರು.
ಇದನ್ನೂ ಓದಿ: ಅಡಿಕೆ ಎಲೆ ಚುಕ್ಕೆ ರೋಗ ತಡೆಯಲು ಕೇಂದ್ರ ಸರ್ಕಾರ ಎನ್ಎಸ್ಸಿ ಸ್ಥಾಪಿಸಿದೆ: ಜೆ.ಪಿ.ನಡ್ಡಾ
ಕಾಂಗ್ರೆಸ್ ವಿರುದ್ದ ನಡ್ಡಾ ವಾಗ್ದಾಳಿ: ಕಾಂಗ್ರೆಸ್ ಪಕ್ಷ ನೀತಿ ನಿಯಮ ಇಲ್ಲದ ಪಕ್ಷ. ಜಾತಿ ಮತ್ತು ಧರ್ಮದ ಆಧಾರದಲ್ಲಿ ಕಾಂಗ್ರೆಸ್ ಆಡಳಿತ ನಡೆಸುತ್ತದೆ. ಭ್ರಷ್ಟಾಚಾರವನ್ನು ತೊಲಗಿಸಬೇಕಾದರೆ ಮೊದಲು ಕಾಂಗ್ರೆಸ್ ಪಕ್ಷವನ್ನು ತೊಲಗಿಸಿ ಎಂದು ಕೈ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಡ್ಡಾ, ಸಿದ್ದರಾಮಯ್ಯ ಅವರನ್ನು ಈ ಬಾರಿ ಮನೆಗೆ ಕಳುಹಿಸಿ. ಕಳಿಸುತ್ತಿರಲ್ಲವಾ ಎಂದು ನೆರೆದಿದ್ದ ಜನರನ್ನು ಕೇಳಿ ಉತ್ತರ ಪಡೆಯುವ ಕೆಲಸ ಮಾಡಿದರು.
ಇದನ್ನೂ ಓದಿ: ಮಾಸ್ಕ್ ಹಾಕದೇ ಅಕ್ಕಪಕ್ಕ ಕುಳಿತು ಸಂತೋಷ ಪಡುವುದಕ್ಕೆ ಮೋದಿ ಕಾರಣ: ಜೆ.ಪಿ ನಡ್ಡಾ