ಹಾಸನ : ಕಲಾವಿದರ ಬದುಕು ಸುಗಂಧ ಬೀರುವ ಅಗರಬತ್ತಿಯಂತೆ, ತಾವು ಉರಿದು ಇತರರಿಗೆ ಪರಿಮಳ ಬೀರುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಅಭಿಪ್ರಾಯಪಟ್ಟರು.
ನಗರದ ಹಾಸನಾಂಬ ಕಲಾ ಕ್ಷೇತ್ರದಲ್ಲಿ ನಡೆದ ಸಾಲಗಾಮೆ ನಂಜುಂಡೇಗೌಡ ಚಿತ್ರೋತ್ಸವದಲ್ಲಿ ಮಾತನಾಡಿ, ಚಲನಚಿತ್ರಗಳು ಪ್ರೇಕ್ಷಕರ ಮನಸನ್ನು ಹಗುರಗೊಳಿಸುತ್ತವೆ, ನಮ್ಮ ಎಲ್ಲಾ ರೀತಿಯ ಭಾವನೆಗಳನ್ನು ಮರೆಸಿ 3 ಗಂಟೆಗಳ ಕಾಲ ನಮಗೆ ಮನೋರಂಜನೆ ನೀಡಿ ಯಾವುದಾದರೊಂದು ರೀತಿಯಲ್ಲಿ ಬದುಕಿಗೆ ಹೊಸ ಹುರುಪನ್ನು ನೀಡುತ್ತವೆ, ಈ ಕಾರ್ಯವನ್ನು ಮಾಡುವ ಸಿನಿಮಾ ರಂಗದವರಿಗೆ ನಾವು ಸದಾ ಸಹಕಾರ ನೀಡಬೇಕು ಎಂದರು.
ಸಾಲಗಾಮೆ ನಂಜುಂಡೇಗೌಡರು ಹಲವಾರು ರೀತಿಯಲ್ಲಿ ಏರಿಳಿತಗಳನ್ನು ಅನುಭವಿಸಿ ಈ ಸ್ಥಾನಕ್ಕೆ ಬಂದಿರುವವರು, ಆ ಶ್ರಮ ಕೇವಲ ಅನುಭವಿಸಿದವರಿಗೆ ಮಾತ್ರ ತಿಳಿಯುತ್ತದೆ. ಸಿನಿಮಾ ರಂಗದಲ್ಲಿ ತಮ್ಮ ಸಾಧನೆಯಿಂದ ನಂಜುಂಡೇಗೌಡರು ನಮ್ಮ ಜಿಲ್ಲೆಗೆ ಅಪಾರ ಕೀರ್ತಿಯನ್ನು ತಂದುಕೊಟ್ಟಿದ್ದಾರೆ, ಇನ್ನೂ ಹೆಚ್ಚು ಹೆಚ್ಚು ಒಳ್ಳೆಯ ಸಿನಿಮಾಗಳನ್ನು ಮಾಡುವ ಶಕ್ತಿ ಅವರಿಗೆ ಬರಲಿ ಎಂದು ಶುಭಕೋರಿ ಸಾಕ್ಷ್ಯ ಚಿತ್ರ ಬಿಡುಗಡೆ ಮಾಡಿದರು.
ಹಿರಿಯ ಚಲನಚಿತ್ರ ನಟ ಹಾಗೂ ಡಾ. ರಾಜ್‍ಕುಮಾರ್ ಪ್ರಶಸ್ತಿ ಪುರಸ್ಕೃತರಾದ ಜೆ.ಕೆ ಶ್ರೀನಿವಾಸಮೂರ್ತಿ ಕಾರ್ಯಕ್ರಮ ಉದ್ಘಾಟನೆಯನ್ನು ನೆರವೇರಿಸಿದರು.