ಹಾಸನ: ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ ಅವರಿಗೆ ಆದಾಯ ತೆರಿಗೆ (ಐಟಿ) ನೋಟಿಸ್ ಜಾರಿ ಮಾಡಿದೆ. ಈ ಬಗ್ಗೆ ಖುದ್ದು ದೇವೇಗೌಡರ ಪುತ್ರ ಎಚ್.ಡಿ.ರೇವಣ್ಣ ಮಾಹಿತಿ ನೀಡಿದ್ದಾರೆ. ಅಲ್ಲದೇ, ಇದನ್ನು ಬಿಜೆಪಿಯ ರಾಜಕೀಯ ಸೇಡು ಎಂದು ಅವರು ಟೀಕಿಸಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ, ಒಬ್ಬ ಮಾಜಿ ಪ್ರಧಾನಿಯ ಪತ್ನಿಗೆ ಐಟಿ ನೋಟಿಸ್ ನೀಡಲಾಗಿದೆ. ಆಸ್ತಿಯ ಮೂಲ ಪತ್ತೆ ಹೆಚ್ಚುವ ನಿಟ್ಟಿನಲ್ಲಿ ನೋಟಿಸ್ ಜಾರಿ ಮಾಡಿರುವುದಾಗಿ ಐಟಿ ಹೇಳಿದೆ. ನಮ್ಮಪ್ಪ-ಅಮ್ಮ ಕೋಟ್ಯಂತರ ರೂ. ಆಸ್ತಿ ಗಳಿಸಿದ್ದಾರಾ ಎಂದು ಅವರು ಪ್ರಶ್ನಿಸಿದ್ದಾರೆ.
ಈ ಹಿಂದೆ ನಾನು ಆಲೂಗಡ್ಡೆ ಬೆಳೆಯುತ್ತಿದ್ದೆ. ಈಗ ಗದ್ದೆಯಲ್ಲಿ ಕಬ್ಬು ಬೆಳೆಯುತ್ತಿದ್ದೇನೆ. ಆಡಳಿತಾರೂಢ ಬಿಜೆಪಿ ರಾಜಕೀಯ ಸೇಡು ತೀರಿಸಿಕೊಳ್ಳುತ್ತಿದೆ. ರಾಜ್ಯದಲ್ಲಿ ಒಬ್ಬೊಬ್ಬ ಪ್ರಾದೇಶಿಕ ಸಾರಿಗೆ ಅಧಿಕಾರಿ ನೂರಾರು ಕೋಟಿ ರೂ. ಮಾಡಿದ್ದಾರೆ. ಅವರಿಗೆ ನೋಟಿಸ್ ಕೊಡುವವರ್ಯಾರು?. ಇಂತಹವರು ಇದುವರೆಗೆ ಎಷ್ಟು ಆಸ್ತಿ ಗಳಿಸಿದ್ದಾರೆ ಅನ್ನೋದು ಗೊತ್ತಾ ಎಂದು ಅಸಮಾಧಾನ ವ್ಯಕ್ತಪಡಿಸಿದರು.
'ಕದ್ದು ವ್ಯವಸಾಯ ಮಾಡುತ್ತಿದ್ದೆವಾ?': ದಶಕಗಳಿಂದ ಅಲ್ಲಿ ನಮ್ಮ ಜಮೀನಿದೆ. ನಾವೇನು ಹೊಸದಾಗಿ ಆಸ್ತಿ ಮಾಡಲು ಹೋಗಿದ್ದೀವಾ?. ನಾನೇನಾದರೂ ಸೈಟ್ ಬ್ಯುಸಿನೆಸ್ ಮಾಡಲು ಹೋಗಿದ್ದೇನಾ.?. ಇಲ್ಲ ಕದ್ದು ವ್ಯವಸಾಯ ಮಾಡುತ್ತಿದ್ದೇವಾ?. ನಮ್ಮ ಜಮೀನನ್ನು ಡ್ರೋಣ್ ಮೂಲಕ ಸರ್ವೆ ಮಾಡಲಿ. ಕಾನೂನು ರೀತಿ ಏನಿದೆ ನೋಟಿಸ್ ಕೊಡಿ. ನಮ್ಮ ತಾಯಿಗೆ ಕೊಡುವ ಜೊತೆಗೆ ನನಗೂ ಕೊಡಿ ಎಂದು ರೇವಣ್ಣ ಗರಂ ಆದರು.
ಜೆಡಿಎಸ್ ನಾಯಕರನ್ನು ಟಾರ್ಗೆಟ್ ಮಾಡಿಕೊಂಡು ನೋಟಿಸ್ ನೀಡುತ್ತಿದ್ದಾರೆ. ಇಂತಹ ದ್ವೇಷ ಸಾಧನೆ ಶಾಶ್ವತವಾಗಿ ಇರುವುದಿಲ್ಲ. ಇದಕ್ಕೆ ನಾವು ಸೂಕ್ತ ಸಮಯದಲ್ಲಿ ಸರಿಯಾದ ಉತ್ತರವನ್ನೇ ಕೊಡುತ್ತೇವೆ ಎಂದು ವಾಗ್ದಾಳಿ ನಡೆಸಿದರು.
'ಸಾಮರಸ್ಯದಿಂದ ಬದುಕಬೇಕು': ಬೇಲೂರು ಚೆನ್ನಕೇಶವ ದೇಗುಲದ ಬಳಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ವಿಚಾರಕ್ಕೆ ಸಂಬಂಧಿಸಿದಂತೆಯೂ ರೇವಣ್ಣ ಇದೇ ವೇಳೆ ಪ್ರತಿಕ್ರಿಯೆ ನೀಡಿದರು. ಜಿಲ್ಲೆಯಲ್ಲಿ ಹಿಂದೂ, ಮುಸ್ಲಿಂ ಐಕ್ಯತೆಯಿಂದ ಬದುಕುತ್ತಿದ್ದಾರೆ. ಹಿಂದೂ ಬೇರೆಯಲ್ಲ, ಮುಸ್ಲಿಂ ಬೇರೆಯಲ್ಲ ಎಂದರು.
'ಸಾಬ್ರಾಗಿ ಹುಟ್ಟಿ ಜೀವನ ಮಾಡ್ಬೇಡಿ ಅನ್ನೋಕಾಗುತ್ತಾ?': ಮುಸ್ಲಿಮರಿಗೆ ಬೇರೆ ರೀತಿ ಅಡ್ಡಿಪಡಿಸಿದರೆ ಕಾನೂನು ರೀತಿಯ ಕ್ರಮ ಕೈಗೊಳ್ಳಿ. ಅಣ್-ತಮ್ಮಂದಿರು ಹಾಗೇ ಹೋಗಬೇಕು. ಯಾರೋ ನಾಲ್ಕು ಜನ ಕೇಸರಿ ಶಾಲು ಹಾಕಿಕೊಂಡು ಬಂದರೆ ಕೇರ್ ಮಾಡಲ್ಲ. ಎಲ್ಲ ಸಮಾಜದವರು ಒಟ್ಟಾಗಿ ಸಾಮರಸ್ಯದಿಂದ ಬದುಕಬೇಕು. 'ಸಾಬ್ರಾಗಿ ಹುಟ್ಟಿ ಜೀವನ ಮಾಡಬೇಡಿ ಅನ್ನೋಕೆ ಆಗುತ್ತಾ'. ಬೇಲೂರು, ಹೊಳೆನರಸೀಪುರ ಎಲ್ಲಿಯೇ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಹೇರಬಾರದು. ಹಿಂದೂ, ಮುಸ್ಲಿಂ ಭಾವೈಕ್ಯತೆಯಿಂದ ಬದುಕಬೇಕೆಂದರು.
ಇದನ್ನೂ ಓದಿ: ಬರೇ ಈಶ್ವರಪ್ಪ ಅಲ್ಲ, ಇಡೀ ಸರ್ಕಾರವೇ ಭ್ರಷ್ಟಾಚಾರದಲ್ಲಿ ತೊಡಗಿದೆ : ಪ್ರಿಯಾಂಕ್ ಖರ್ಗೆ