ಹಾಸನ: ಪ್ರಧಾನಿ ಮೋದಿಯವರಿಗೆ ಕನ್ನಡಿಗರ ಬಗ್ಗೆ ಕಾಳಜಿ ಇಲ್ಲ ರಾಜ್ಯದಲ್ಲಿ ನೆರೆಹಾವಳಿಯಿಂದ ಅಪಾರ ಪ್ರಮಾಣದ ಹಾನಿಯಾಗಿದ್ದರೂ ರಾಜ್ಯಕ್ಕೆ ಬಿಡಿಗಾಸು ಕೂಡ ಕೊಟ್ಟಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಚನ್ನರಾಯಪಟ್ಟಣದ ಮಾಜಿ ಶಾಸಕ ಸಿ. ಎಸ್ ಪುಟ್ಟೇಗೌಡರವರ ಮನೆಗೆ ಭೇಟಿ ನೀಡಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ರಾಜ್ಯಕ್ಕೆ ಪರಿಹಾರ ಕೊಡಲು ಬಹುಶ: ಕೇಂದ್ರ ಸರ್ಕಾರ ದಿವಾಳಿ ಆಗಿರಬಹುದು. ರಾಜ್ಯದಲ್ಲಿ ನೆರೆ ಪ್ರವಾಹ ಉಂಟಾದಾಗ ಮೋದಿಯವರು ಜನರ ಕಷ್ಟ ಕೇಳುವುದಿರಲಿ ಸಿಎಂ ಯಡಿಯೂರಪ್ಪನವರನ್ನು ಭೇಟಿ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ನೆರೆ ಪ್ರವಾಹದಿಂದ ರಾಜ್ಯದಲ್ಲಿ 7 ಲಕ್ಷ ಜನ ನೆಲೆ ಕಳೆದುಕೊಂಡಿದ್ದಾರೆ. 2 ಲಕ್ಷಕ್ಕೂ ಅಧಿಕ ಮನೆಗಳು ಬಿದ್ದು ಹೋಗಿವೆ. ಇಷ್ಟು ಹಾನಿಯಾದರೂ ಸರ್ಕಾರ ಪರಿಹಾರ ನೀಡಲು ಮುಂದಾಗಿಲ್ಲ. ಈ ಹಿಂದೆ ರಾಜ್ಯದಲ್ಲಿ ಬಿಜೆಪಿಯನ್ನ ಇಷ್ಟು ದೊಡ್ಡ ಪ್ರಮಾಣದಲ್ಲಿ ಜನರು ಬೆಂಬಲಿಸಿರಲಿಲ್ಲ. ಈಗ ದೊಡ್ಡ ಬೆಂಬಲ ನೀಡಿದ್ದು, ಮೋದಿಗೆ ಕನ್ನಡಿಗರ ಬಗ್ಗೆ ಕಾಳಜಿ ಇಲ್ಲ ಎಂದು ಗುಡುಗಿದ್ರು. 2009ರಂದು ನೆರೆಯಾಗಿದ್ದಾ, ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ರು. ಕೂಡಲೇ ರಾಜ್ಯಕ್ಕೆ ಬಂದು ವೈಮಾನಿಕ ಸಮೀಕ್ಷೆ ಮಾಡಿ, ₹1600 ಕೋಟಿ ಪರಿಹಾರ ಘೋಷಣೆ ಮಾಡಿದ್ದರು. ಇದು ಮೋದಿಗೆ ಯಾಕೆ ಆಗಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಅಭೂತಪೂರ್ವ ಗೆಲುವಿಗೆ ಸಿದ್ದರಾಮಯ್ಯ ಕಾರಣ ಎಂದ ಈಶ್ವರಪ್ಪ ಮಾತಿಗೆ ತಿರುಗೇಟು ನೀಡಿದ ಮಾಜಿ ಸಿಎಂ, ಈಶ್ವರಪ್ಪ ಓರ್ವ ಸಂಸ್ಕೃತಿ ಇಲ್ಲದಿರೋ ಮನುಷ್ಯ. ಅವರಿಗೆ ರಾಜಕೀಯ ಭಾಷೆ ಗೊತ್ತಿಲ್ಲ ಆದರ ಬಗ್ಗೆ ಮಾತನಾಡದಿರುವುದೇ ಒಳ್ಳೆಯದು ಎಂದು ಮರು ಟಾಂಗ್ ಕೊಟ್ಟರು. ಇನ್ನು ಚನ್ನರಾಯಪಟ್ಟಣದ ಸಹಕಾರಿ ಸಂಘದಲ್ಲಿ ನಡೆದಿರುವ ಅವ್ಯವಹಾರವನ್ನು ಸಿ.ಎಸ್. ಪುಟ್ಟೇಗೌಡ ಗಮನಕ್ಕೆ ತಂದಿದ್ದಾರೆ. ಇದರ ಸಂಪೂರ್ಣ ಮಾಹಿತಿಯನ್ನು ಪಡೆದು ವಿಧಾನಸಭೆಯಲ್ಲಿ ಚರ್ಚಿಸುತ್ತೇನೆ ಎಂದಿದ್ದಾರೆ.