ಆಲೂರು: ಸರ್ವ ಆತ್ಮರಿಗೆ, ಮಹಾತ್ಮರಿಗೆ, ದೇವಾತ್ಮರಿಗೆ ಎಲ್ಲರಿಗೂ ಪರಮಪಿತ ಒಬ್ಬನೇ ಆಗಿದ್ದಾನೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ರಾಜಸ್ಥಾನ ವಿಭಾಗದ ಆರ್.ಇ.ಆರ್.ಎಫ್. ಅಬುಪರ್ವತ ಮೀಡಿಯಾ ವಿಭಾಗದ ಮುಖ್ಯಸ್ಥ ರಾಜಯೋಗಿ ಬ್ರಹ್ಮಕುಮಾರ ಕರುಣಾಜಿ ಹೇಳಿದರು.
ಆಲೂರು ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಸಮೀಪ ನೂತನವಾಗಿ ನಿರ್ಮಾಣವಾಗಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಶಿವಜ್ಯೋತಿ ಭವನ ಉದ್ಘಾಟಿಸಿ ಮಾತನಾಡಿದ ಅವರು, ಭಾರತೀಯ ಸನಾತನ ಧರ್ಮವನ್ನು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿಶ್ವವಿದ್ಯಾಲಯ ಉಳಿಸಿ ಬೆಳೆಸುವಂತಹ ಕೆಲಸವನ್ನು ಮಾಡುತ್ತಾ ವಿಶ್ವದ 140 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಭಾರತದಲ್ಲಿ 45 ಸಾವಿರ ಪಾಠ ಶಾಲೆಗಳಲ್ಲಿ 45 ಸಾವಿರ ಅಕ್ಕಂದಿರು ವಿಶ್ವಾದ್ಯಂತ ಇಂತಹ ಪುಣ್ಯ ಕಾರ್ಯದಲ್ಲಿ ನಿರತರಾಗಿ ನಾವೆಲ್ಲರೂ ಒಂದೇ ಈಶ್ವರನ ಮಕ್ಕಳು. ಒಂದು ಪರಿಹಾರ ಎನ್ನುವ ಸಂದೇಶವನ್ನು ಸಾರುತ್ತಾ ನಮ್ಮ ಸಂಸ್ಥೆ ಯಾವುದೇ ಫಲಾಫಲಗಳನ್ನು ನಿರೀಕ್ಷಿಸದೆ ಜ್ಞಾನವನ್ನು ಇಲ್ಲಿ ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ ಎಂದರು.
ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾವುದೇ ಜಾತಿ, ಪಂತ, ಧರ್ಮ ಭೇದ ಭಾವವಿಲ್ಲದ ಸಂಸ್ಥೆ ಇದಾಗಿದೆ. ಇಲ್ಲಿ ಸ್ವಯಂ ಪರಮಾತ್ಮನನ್ನು ಪರಿಚಯ ಮಾಡಿಕೊಡುವ ಆಧ್ಯಾತ್ಮಿಕ ಚಿಂತನೆಯ ಶಿಕ್ಷಣವನ್ನು ಉಚಿತವಾಗಿ ನೀಡಲಾಗುತ್ತಿದೆ. ಇದು ಇತರೆ ಸಂಸ್ಥೆಗಳಿಗಿಂತ ಭಿನ್ನವಾಗಿದೆ. ವಿಶ್ವಕ್ಕೆ ಶಾಂತಿ ಸಂದೇಶ ಸಾರುವಲ್ಲಿ ಅಗ್ರಸ್ಥಾನದಲ್ಲಿದೆ. ಇಂತಹ ಸಂಸ್ಥೆಗೆ ಸಾರ್ವಜನಿಕರು ತನು, ಮನ, ಧನದಿಂದ ಪ್ರೋತ್ಸಾಹಿಸಬೇಕು ಎಂದರು.