ಹಾಸನ: ಜಿಲ್ಲೆಯಲ್ಲಿ ಪ್ರತಿನಿತ್ಯ 10ಕ್ಕೂ ಹೆಚ್ಚು ಮಂದಿ ಆಮ್ಲಜನಕ ಕೊರತೆಯಿಂದ ಸಾಯುತ್ತಿದ್ದಾರೆ. ಈ ಬಗ್ಗೆ ಆರೋಗ್ಯ ಇಲಾಖೆ, ಜಿಲ್ಲಾಡಳಿತ ಮತ್ತು ಮುಖ್ಯಮಂತ್ರಿಗಳು ಒಂದಿಷ್ಟೂ ಗಮನಹರಿಸುತ್ತಿಲ್ಲ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಆರೋಪಿಸಿದ್ದಾರೆ.
ಹಾಸನದ ಹೊಯ್ಸಳ ಸಭಾಂಗಣದಲ್ಲಿ ಕೋವಿಡ್-19 ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯನ್ನು ರಾಜ್ಯ ಸರ್ಕಾರ ಕಡೆಗಣಿಸಿದ್ದು, ಮಲತಾಯಿ ಧೋರಣೆ ಅನುಸರಿಸುತ್ತಿದೆ. ಹೀಗೆ ಸರ್ಕಾರ ದ್ವೇಷದ ರಾಜಕಾರಣ ಮಾಡದೆ ಜಿಲ್ಲೆಗೂ ಉತ್ತಮ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.
ಖಾಸಗಿ ಆಸ್ಪತ್ರೆಗಳಿಗೆ ಹಣ ಕಟ್ಟಲು ಸಾಧ್ಯವಾಗದ ಮಹಿಳೆಯರು ತಮ್ಮ ಮಾಂಗಲ್ಯ ಮಾರಿ ಕುಟುಂಬದ ಸದಸ್ಯರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಇಂಥ ಖಾಸಗಿ ಆಸ್ಪತ್ರೆಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ಜಿಲ್ಲೆಯ ಬಡವರಿಗೆ ಉಚಿತ ಚಿಕಿತ್ಸೆಯ ಸೌಲಭ್ಯ ಒದಗಿಸಬೇಕು. ಈ ಸಂದರ್ಭದಲ್ಲಿ ರಾಜಕೀಯ ಬೇಡ. ಬಡವರ ಪ್ರಾಣ ಉಳಿಸಬೇಕಾಗಿದೆ. ಈ ಕೆಲಸವನ್ನು ತಾವು ಮತ್ತು ಮುಖ್ಯಮಂತ್ರಿಗಳು ಮಾಡಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಎರಡು ಸಾವಿರದಷ್ಟು ವೈದ್ಯರ ಕೊರತೆಯಿದ್ದು, ಅದನ್ನು ದಯಮಾಡಿ ಭರ್ತಿ ಮಾಡಬೇಕು. ಮೊನ್ನೆ ಬಂದ ಆರೋಗ್ಯ ಸಚಿವರು ಜಿಲ್ಲೆಗೆ ಸಿಲಿಂಡರ್ ಕೊಡುತ್ತೇನೆ ಎಂದರು. ಹಾಸನದಿಂದ ಮೂರ್ನಾಲ್ಕು ಬಾರಿ ವಾಹನ ಬೆಂಗಳೂರಿಗೆ ಹೋಗಿ ವಾಪಸ್ ಬಂದಿದೆ. ಹೀಗಾದರೆ ಹೇಗೆ ಎಂದು ಆರೋಗ್ಯ ಸಚಿವರಿಗೆ ಇದೇ ಸಂದರ್ಭದಲ್ಲಿ ತಮ್ಮ ಮಾತಿನ ಮೂಲಕ ಕುಟುಕಿದರು.
ಹೋಮ್ ಐಸೋಲೇಷನ್ ಬೇಡ
ಇದೇ ಸಭೆಯಲ್ಲಿ ಭಾಗಿಯಾಗಿದ್ದ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಮಾತನಾಡಿ, ಹೋಮ್ ಐಸೋಲೇಷನ್ ನಿಲ್ಲಿಸಬೇಕು. ಇಲ್ಲದಿದ್ದರೆ ನಮ್ಮ ರಾಜ್ಯದಲ್ಲಿ ಕೋವಿಡ್ ಸೋಂಕಿತರನ್ನು ಕಡಿಮೆ ಮಾಡಲು ಸಾಧ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಅವರಿಗೆ ಮನವಿ ಮಾಡಿದರು.
ಹೋಂ ಐಸೋಲೇಷನ್ನಿಂದ ಗ್ರಾಮೀಣ ಭಾಗದಲ್ಲೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಮೊದಲು, ರಾಜ್ಯದಲ್ಲಿ ಸೀಲ್ಡೌನ್, ಕೈಗೆ ಸೀಲ್ ಹಾಕುವ ವ್ಯವಸ್ಥೆ ಮಾಡಿದ್ರಿ. ಈಗ ಆ ಯೋಜನೆಗಳನ್ನು ತೆಗೆದು ಹಾಕಿರುವುದರಿಂದ ಜನರಲ್ಲಿ ಭಯ ಹೋಗಿದ್ದು, ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುತ್ತಿದೆ ಎಂದರು.
ಆಯುಷ್ಮಾನ್ ಯೋಜನೆಯಲ್ಲಿ ಚಿಕಿತ್ಸೆ ಸಿಗುತ್ತಿಲ್ಲ
ಆಯುಷ್ಮಾನ್ ಭಾರತ ಯೋಜನೆಯಲ್ಲಿ ಫಲಾನುಭವಿಗಳಿಗೆ ಚಿಕಿತ್ಸೆ ಸರಿಯಾದ ರೀತಿ ದೊರೆಯುತ್ತಿಲ್ಲ. ಹೀಗಾದರೆ ಬಡವರು ತಮ್ಮ ಕುಟುಂಬದ ರೋಗಿಗಳನ್ನು ಉಳಿಸಿಕೊಳ್ಳಲು ಹೇಗೆ ಸಾಧ್ಯ ಎಂದು ಶ್ರವಣಬೆಳಗೊಳ ಶಾಸಕ ಸಿ.ಎನ್. ಬಾಲಕೃಷ್ಣ ಪ್ರಶ್ನಿಸಿದರು.
ಆರೋಗ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡಿ ಗ್ರೂಪ್ ನೌಕರರು ಕೋವಿಡ್ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿದ್ದು, ಅವರಿಗೂ ಮೊದಲ ಪ್ರಾಶಸ್ತ್ಯ ನೀಡಬೇಕು ಹಾಗೂ ಪ್ರತಿ ತಿಂಗಳ ಗೌರವ ಧನವಾಗಿ ಕನಿಷ್ಠ ಮೂರು ಸಾವಿರ ರೂ. ಹೆಚ್ಚುವರಿಯಾಗಿ ನೀಡಬೇಕು ಎಂದರು.