ಹಾಸನ: ಲಾಕ್ಡೌನ್ಅನ್ನೇ ಬಂಡವಾಳ ಮಾಡಿಕೊಂಡ ಮರಳುಗಳ್ಳರು ಹೇಮೆಯ ಒಡಲಲ್ಲಿ ರಾಜರೋಷವಾಗಿ ಅಕ್ರಮ ಮರಳುಗಾರಿಕೆ ಮಾಡುತ್ತಿದ್ದಾರೆ.
ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಶ್ರೀರಾಮ ದೇವರ ಅಣೆಕಟ್ಟೆ ನಾಲಾ ವ್ಯಾಪ್ತಿಯಲ್ಲಿ ಮರಳು ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ದೊಡ್ಡ ದೊಡ್ಡ ಕಬ್ಬಿಣದ ತೆಪ್ಪ ಬಳಸಿ ಮರಳು ತೆಗೆಯುತ್ತಿದ್ದು, ಪ್ರಶ್ನೆ ಮಾಡಲು ಹೋದ ಯುವಕರನ್ನು ಬೆದರಿಸುತ್ತಿದ್ದಾರೆ.
ಮೈಸೂರು ಮಹಾರಾಜರ ಕಾಲದಲ್ಲಿ ಕಟ್ಟಿದ ಅಣೆಕಟ್ಟು ಇದಾಗಿದ್ದು, ಈಗ ಪುನಃ ಇಲ್ಲಿ ಮತ್ತೊಂದು ಚೆಕ್ ಡ್ಯಾಮ್ ನಿರ್ಮಿಸಲಾಗುತ್ತಿದೆ. ಅಣೆಕಟ್ಟೆ ಬಳಿ ಅಕ್ರಮ ಮರಳು ಗಣಿಗಾರಿಕೆ ಮಾಡುತ್ತಿರು ಹಿನ್ನೆಲೆ ಅಣೆಕಟ್ಟೆಗೂ ತೊಂದರೆಯಾಗುವ ಸಾಧ್ಯತೆ ಇದೆ. ಸಂಸದರ ತವರಲ್ಲೇ ಎಗ್ಗಿಲ್ಲದೇ ನಡೆಯುತ್ತಿರುವ ಮರಳು ದಂಧೆಗೆ ಮೈಸೂರು, ಮಂಡ್ಯ ಭಾಗದಿಂದ ಕಾರ್ಮಿಕರನ್ನ ಕರೆಸಲಾಗಿದೆ.
ಕೊರೊನಾ ನಡುವೆಯೂ ಅಡ್ಡ ದಾರಿಯಲ್ಲಿ ಹಣ ಮಾಡಲು ಮುಂದಾದ ಮರಳು ಮಾಫಿಯಾ ವಿರುದ್ಧ ಸಂಬಂಧ ಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಸ್ಥಳೀಯರ ಆರೋಪ.