ಹಾಸನ: ಹಾಸನಾಂಬ ಕಲಾಕ್ಷೇತ್ರದ ದುರಸ್ತಿ ಕಾರ್ಯವನ್ನು ತುರ್ತಾಗಿ ಕೈಗೊಳ್ಳದಿದ್ದರೆ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ ಎಚ್ಚರಿಸಿದರು.
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಶ್ರೀ ಅನ್ನಪೂರ್ಣೇಶ್ವರಿ ಕಲಾಸಂಘದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ನಾಟಕಗಳ ಪ್ರದರ್ಶನ ಕಾರ್ಯಕ್ರಮದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದ್ರು.
ಜನಪ್ರತಿನಿಧಿಗಳು ತಮ್ಮ ಗೌರವ ಹೆಚ್ಚಿಸಿಕೊಳ್ಳಬೇಕಾದರೆ ಕೂಡಲೇ ಹಾಸನಾಂಬ ಕಲಾಕ್ಷೇತ್ರದ ದುರಸ್ತಿ ಪ್ರಾರಂಭಿಸಬೇಕು. ಇಲ್ಲವಾದರೆ ಡಿ. 25ರೊಳಗೆ ಎಲ್ಲಾ ಕನ್ನಡಪರ ಸಂಘಟನೆಗಳ, ಕಲಾವಿದರ ತುರ್ತು ಸಭೆಯನ್ನು ಜಿಲ್ಲಾ ಕಸಾಪದಲ್ಲಿ ಕರೆಯಲಾಗುವುದು. ನಂತರ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ಮಾಡಿ, ಕಲಾಭವನಕ್ಕೆ ಬೀಗ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು.ಈ ಮೂಲಕ ಜಿಲ್ಲಾಡಳಿತ ಹಾಗು ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡುವುದಾಗಿ ಮಂಜೇಗೌಡ ಎಚ್ಚರಿಸಿದರು.
ಇನ್ನು ಜಿಲ್ಲೆಯಲ್ಲಿ ಉತ್ತಮ ಕಲಾವಿದರಿದ್ದಾರೆ. ಯುವಕರಿಗೆ ಕನ್ನಡ ಸಾಹಿತ್ಯ ಪರಿಷತ್ ಮೂಲಕ ಹಿರಿಯ ಕಲಾವಿದರಿಂದ ಉಚಿತ ತರಬೇತಿ ಕೊಡಿಸುವ ಕಾರ್ಯಾಗಾರ ಮಾಡುವ ಉದ್ದೇಶವಿದೆ. ಕಸಾಪ ಆವರಣದಲ್ಲಿ ಕಲಾವಿದರಿಗಾಗಿ ಒಂದು ಕೊಠಡಿ ನಿರ್ಮಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.