ಹಾಸನ : ಈಶ್ವರಪ್ಪನಿಗೆ ಬಂದಿರುವ ಸ್ಥಿತಿ ನೋಡಿದರೆ ಅಯ್ಯೋ ಎನಿಸುತ್ತದೆ. ಅವರ ಸ್ಥಾನದಲ್ಲಿ ನಾನೇನಾದರೂ ಇದ್ದಿದ್ದರೆ ಒಂದು ಕ್ಷಣ ಮಂತ್ರಿಯಾಗಿ ಇರುತ್ತಿರಲಿಲ್ಲ. ರಾಜೀನಾಮೆ ಕೊಟ್ಟು ಹೊರ ಬರುತ್ತಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ನುಗ್ಗೆಹಳ್ಳಿ ಸಮೀಪದ ಪೋಲೆನಹಳ್ಳಿ ಗ್ರಾಮದಲ್ಲಿ ನೂತನ ದೇವಾಲಯದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ ಅವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಹಾಗೂ ಸಿಎಂ ನಡುವೆ ಜಟಾಪಟಿ ನಡೆಯುತ್ತಿದೆ.
ಯಡಿಯೂರಪ್ಪ ನಡು ಬುಗು ಬುಗು : ಈಶ್ವರಪ್ಪ ಕೂಡ ಸೀನಿಯರ್ ರಾಜಕಾರಣಿ. ಆದ್ರೆ, ಅಪ್ಪ-ಮಗ ಸೇರಿ ಸರ್ವಾಧಿಕಾರಿಗಳಂತೆ ನಡೆದುಕೊಳ್ಳುತ್ತಿದ್ದಾರೆ. ಸ್ವಾಭಿಮಾನ ಬಹಳ ಮುಖ್ಯ. ನನ್ನ 40 ವರ್ಷ ರಾಜಕೀಯದಲ್ಲಿ ಸಲಾಂ ಹೊಡೆದು ರಾಜಕೀಯ ಮಾಡೇ ಇಲ್ಲ, ಮುಂದೆಯೂ ಮಾಡೋದಿಲ್ಲ.
ಯಡಿಯೂರಪ್ಪ ಅದೆಷ್ಟು ದಿನ ಕುರ್ಚಿಯಲ್ಲಿರ್ತಾರೋ ಗೊತ್ತಿಲ್ಲ. ಅವರ ನಡು ಬುಗು ಬುಗು ಅನ್ನುತ್ತಿದೆ. ಹೀಗಿರುವಾಗ, ಮಾನ-ಮರ್ಯಾದೆ ಬಿಟ್ಟು ಮಂತ್ರಿಗಿರಿ ಮಾಡುವುದಕ್ಕೆ ಆಗುತ್ತಾ ಹೇಳಿ.? ಎಂದು ಸಿಎಂ ವಿರುದ್ಧ ಹರಿಹಾಯ್ದರು.
ಭಕ್ತ ಪ್ರಹ್ಲಾದ್ ಪಿಕ್ಚರ್ ನೋಡಿಲ್ವಾ?: ನಾನು ಹೆಚ್ಚು ದೇವಸ್ಥಾನಕ್ಕೆ ಹೋಗುವುದಿಲ್ಲ. ಯಾಕೆಂದ್ರೆ, ನನ್ನಲ್ಲಿಯೇ ದೇವರಿದ್ದಾನೆ. ರಾಜ್ಯದಲ್ಲಿ 29 ಸಾವಿರ ಹಳ್ಳಿಗಳಿವೆ. ಎಲ್ಲಾ ಹಳ್ಳಿಗಳಲ್ಲೂ ಒಬ್ಬೊಬ್ಬರು ದೇವರು ಇರುತ್ತಾನೆಯೇ.? ದೇವನೊಬ್ಬ ನಾಮ ಹಲವು ಅಲ್ವಾ?. ಭಕ್ತ ಪ್ರಹ್ಲಾದ್ ಪಿಕ್ಚರ್ ನೋಡಿಲ್ವಾ ನೀವು ಎಂದು ಚಿತ್ರದ ಡೈಲಾಗ್ ಹೇಳುವ ಮೂಲಕ ನೆರೆದಿದ್ದ ಜನರನ್ನು ಸ್ವಲ್ಪ ಹೊತ್ತು ನಗಿಸಿದರು.