ಹಾಸನ: ಮನೆಗಳಿಗೆ ನುಗ್ಗಿ ಚಿನ್ನಾಭರಣ ದೋಚುತ್ತಿದ್ದ ಕಳ್ಳನನ್ನು ಬಂಧಿಸುವಲ್ಲಿ ಆಲೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ಎಎಸ್ಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಬಿ. ಎನ್. ನಂದಿನಿ, ಮಾವನೂರು ಗ್ರಾಮದ ಬಳಿ ಮನೆ ಕಳ್ಳತನ ಮಾಡುತ್ತಿದ್ದ ಆಲೂರು ತಾಲೂಕಿನ ಮುದಿಗೆರೆ ಗ್ರಾಮದ ಎಂ. ವಿ. ಸಂತೋಷ್(33) ಎಂಬಾತನನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಈತ ಕಳೆದ ಎರಡು ಮೂರು ದಿನಗಳ ಹಿಂದೆ ಸಕಲೇಶಪುರ ತಾಲೂಕಿನ ಹಳ್ಳಿಗಳಲ್ಲಿ ಮನೆಗಳಲ್ಲಿ ಕಳ್ಳತನ ಮಾಡಿದ್ದ ಚಿನ್ನಾಭರಣವನ್ನು ಮಾರಾಟಮಾಡಲು ಯತ್ನಿಸುವಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಗಿ ತಿಳಿದುಬಂದಿದೆ.
ಈತ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ, ಯಸಳೂರು ಪೊಲೀಸ್ ಠಾಣೆ, ಆಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಗಂಜಿಗೆರೆ ಹಾಗೂ ಮಾದಗೋಡು ಗ್ರಾಮಗಳಲ್ಲಿ ಕಳ್ಳತನ ಮಾಡಿದ್ದಾನೆ ಎಂಬುದು ಖಚಿತವಾಗಿದೆ. ಒಟ್ಟು 4 ಕಳ್ಳತನ ಪ್ರಕರಣಗಳಲ್ಲಿ ಬಂಧಿತನಾಗಿರುವ ಈತನಿಂದ 182ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿವರ ನೀಡಿದರು.