ಹಾಸನ: ಹಾಸನದ ಮಲೆನಾಡು ಭಾಗದಲ್ಲಿ ಹಿಂದೆಂದೂ ಕಂಡರಿಯದ ಮಳೆಯಾಗುತ್ತಿದೆ. ಚಿಕ್ಕಮಗಳೂರಿನ ಮೂಡಿಗೆರೆ ಭಾಗದಲ್ಲಿ ಸುರಿಯುತ್ತಿರುವ ಅತಿಹೆಚ್ಚು ಮಳೆಯಿಂದ ಹಾಸನ ಜಿಲ್ಲೆಯ ಜೀವನಾಡಿಯಾಗಿರುವ ಹೇಮಾವತಿ ಜಲಾಶಯ ತುಂಬಿ ತುಳುಕುತ್ತಿದ್ದು, ಒಳ ಹರಿವು ಹೆಚ್ಚಾಗಿದೆ. ದಿನಕ್ಕೆ ಮೂವತ್ತು ಸಾವಿರ ಕ್ಯೂಸೆಕ್ ನೀರು ಜಲಾಯಶಕ್ಕೆ ಹರಿದು ಬರುತ್ತಿರುವ ನಿಟ್ಟಿನಲ್ಲಿ ಹೇಮಾವತಿ ನದಿ ಪಾತ್ರದಲ್ಲಿರುವ ಹಳ್ಳಿಗಳ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಡಳಿತ ಮನವಿ ಮಾಡಿದೆ. ಜೊತೆಗೆ ಸದ್ಯದ ಪರಿಸ್ಥಿತಿಗೆ ಅನುಗುಣವಾಗಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಹೇಮಾವತಿ ಜಲಾಶಯದಲ್ಲಿ ಸಂಗ್ರಹವಾದ ನೀರು:
ಈಗಾಗಲೇ ಹೇಮಾವತಿ ಜಲಾಶಯದಲ್ಲಿ 28.449 ಟಿಎಂಸಿ ನೀರು ಸಂಗ್ರಹವಾಗಿದೆ. ಕೇವಲ ಎರಡು ದಿನಗಳಲ್ಲಿ 10 ಟಿಎಂಸಿ ನೀರು ಡ್ಯಾಂಗೆ ಹರಿದು ಬಂದಿದ್ದು, ಸಕಲೇಶಪುರದ ಸಕಲೇಶ್ವರ ದೇವಾಲಯ ಮತ್ತು ಶೆಟ್ಟಿಹಳ್ಳಿಯ ಹಿನ್ನೀರಿನಲ್ಲಿ ಇರುವಂತಹ ಹಳೇಯ ಚರ್ಚ್ ಮುಳುಗುವ ಹಂತ ತಲುಪಿದೆ. ಹೀಗಾಗಿ ಇಂತಹ ದೃಶ್ಯವನ್ನು ನೋಡಲು ಈಗ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.
ತಾತ್ಕಾಲಿಕ ಪರಿಹಾರಕ್ಕೆ ಕ್ರಮ:
ಇದಲ್ಲದೆ ಕೆರೆಕಟ್ಟೆಗಳು ಕೂಡ ಉಕ್ಕಿ ಹರಿಯುತ್ತಿದ್ದು, ನಿರಂತರವಾಗಿ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ಬೇಲೂರು ತಾಲೂಕಿನ ನಾರ್ವೇ ಗ್ರಾಮದ ಸಂಪರ್ಕ ಸೇತುವೆ ಕುಸಿದು ಬಿದ್ದಿದೆ. ತಾಲೂಕಿನ ಮಲಸವಾರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಭಾರಿ ಮಳೆಯಿಂದ ಬಕ್ಕರವಳ್ಳಿ ಸೇತುವೆ ಹಾನಿಗೀಡಾಗಿದೆ. ತಹಶೀಲ್ದಾರ್ ಸೇರಿದಂತೆ ಇನ್ನುಳಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತಾತ್ಕಾಲಿಕ ಪರಿಹಾರ ಕ್ರಮಗಳನ್ನು ಕೈಗೊಂಡಿದ್ದಾರೆ.
ಇದನ್ನೂ ಓದಿ: ನಾರಾಯಣಪುರ ಡ್ಯಾಮ್ನಿಂದ ಮೂರುವರೆ ಲಕ್ಷ ಕ್ಯೂಸೆಕ್ ನೀರು ಬಿಡುಗಡೆ : ಕೃಷ್ಣಾ ತೀರದಲ್ಲಿ ಪ್ರವಾಹ ಭೀತಿ
ಒಟ್ಟಾರೆ ಹಾಸನ ಜಿಲ್ಲೆಯ ಅತ್ಯಂತ ಸುರಿಯುತ್ತಿರುವ ಮಳೆಯಿಂದ ಈಗಾಗಲೇ ಜನಜೀವನ ಕೂಡ ಅಸ್ತವ್ಯಸ್ತವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಸದ್ಯದ ಪರಿಸ್ಥಿತಿಗೆ ಅನುಗುಣವಾಗಿ ರೆಡ್ ಅಲರ್ಟ್ ಘೋಷಣೆ ಮಾಡಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ಕೂಡ ಮನವಿ ಮಾಡಿದ್ದಾರೆ.