ಹಾಸನ: ಮೂರು ದಿನದಿಂದ ಜಿಲ್ಲೆಯಲ್ಲಿ ಮಳೆರಾಯ ಅಬ್ಬರಿಸುತ್ತಿದ್ದು, ಮಳೆಯ ಅಬ್ಬರಕ್ಕೆ ಜಿಲ್ಲೆಯ ರೈತಾಪಿ ವರ್ಗ ಸಂತೋಷ ಪಡುತ್ತಿದ್ದರೆ. ಇನ್ನೊಂದೆಡೆ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.
ಸಕಲೇಶಪುರ ಭಾಗದಿಂದ ಆರಂಭವಾದ ಮಳೆ ಜಿಲ್ಲೆಯ ಚನ್ನರಾಯಪಟ್ಟಣ, ಬೇಲೂರು ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸುರಿದಿದೆ. ವರುಣನ ಅಬ್ಬರಕ್ಕೆ ಸಕಲೇಶಪುರ ತಾಲೂಕಿನ ಚಂಗಡಿಹಳ್ಳಿಯಲ್ಲಿ ಮನೆಯ ಮೇಲ್ಛಾವಣಿ ಹಾರಿ ಹೋಗಿದ್ದು, ಗೃಹಪಯೋಗಿ ವಸ್ತುಗಳು ನೀರು ಪಾಲಾಗಿವೆ.
ಇನ್ನು ನಗರದಲ್ಲಿ ರಭಸವಾಗಿ ಬೀಸಿದ ಬಿರುಗಾಳಿಗೆ ಕೆಎಸ್ಆರ್ಟಿಸಿ ತರಬೇತಿ ಕೇಂದ್ರದ ಬಳಿ ಮರವೊಂದು ರಸ್ತೆ ಮೇಲೆ ಬಿದ್ದು ಪರಿಣಾಮ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಅರಕಲಗೂಡು ಪಟ್ಟಣದಲ್ಲಿ ಸಿಡಿಲಿನ ಬಡಿತಕ್ಕೆ ತೆಂಗಿನ ಮರವೂಂದು ಸುಟ್ಟು ಹೋಗಿದೆ.
ಚನ್ನರಾಯಪಟ್ಟಣ ತಾಲೂಕಿನ ಹಲವು ಕಡೆ ತೆಂಗಿನ ಮರಗಳು ನೆರಕ್ಕುರುಳಿವೆ. ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದ ಪುಟ್ಟಣ್ಣ ಹಾಗೂ ದಯಾನಂದ್ ಅವರ ಬಾಳೆ ತೋಟಗಳು ಬೀಸಿದ ಬಿರುಗಾಳಿಗೆ ನೆಲಕಚ್ಚಿವೆ.