ಅರಕಲಗೂಡು (ಹಾಸನ): ಜಿಲ್ಲೆಯ ವಿವಿಧೆಡೆ ಶುಕ್ರವಾರ ಸುರಿದ ಭಾರಿ ಪ್ರಮಾಣದ ಆಲಿಕಲ್ಲು ಮಳೆ, ರೈತರಿಗೆ ಸಂಕಷ್ಟವನ್ನೇ ತಂದೊಡ್ಡಿದೆ.
ಜಿಲ್ಲೆಯ ಮಲೆನಾಡು ಭಾಗವಾದ ಸಕಲೇಶಪುರ, ಬೇಲೂರು ಹಾಗೂ ಅರೆ ಮಲೆನಾಡು ಎಂದೇ ಕರೆಯಲ್ಪಡುವ ಅರಕಲಗೂಡು ತಾಲೂಕಿನ ಕೆಲವು ಭಾಗದಲ್ಲಿ ಸುರಿದ ಆಲಿಕಲ್ಲು ಮಳೆ ಆವಾಂತರನ್ನೇ ಸೃಷ್ಟಿಸಿದೆ.
ಹೌದು.. ಆಲಿಕಲ್ಲು ಮಳೆಯಿಂದಾಗಿ ಅರಕಲಗೂಡು ತಾಲೂಕಿನ ಯಗಟಿ ಗ್ರಾಮದಲ್ಲಿ ಬೆಳೆದ 150 ಎಕರೆಗೂ ಹೆಚ್ಚಿನ ಶುಂಠಿ ಬೆಳೆ ನಾಶವಾಗುವ ಭೀತಿ ಎದುರಾಗಿದೆ. ಅಂಕನಹಳ್ಳಿಯಲ್ಲಿ ಸರ್ಕಾರಿ ಶಾಲೆ ಹಾಗೂ ಶಾನುಭೋಗನಹಳ್ಳಿ ಗ್ರಾಮದ ಮೆಣಸಿನ ತೋಟ, ಕೋಳಿ ಫಾರಂ ಸಂಪೂರ್ಣವಾಗಿ ಆಲಿಕಲ್ಲಿನಿಂದ ಮುಚ್ಚಿಹೋಗಿದ್ದು, ಕಾಶ್ಮೀರದಂತೆ ಕಾಣುತ್ತಿತ್ತು. ಅರೆಮಲೆನಾಡು ಭಾಗದಲ್ಲಿ ರೋಬಸ್ಟಾ ಕಾಫಿ ಕಟಾವ್ ಆಗುತ್ತಿದ್ದು, ನಿರಂತರವಾಗಿ ಸುರಿದ ಮಳೆಯಿಂದಾಗಿ ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ.
ಲಕ್ಷಾಂತರ ರೂ. ಮೌಲ್ಯದ ಬೆಳೆನಾಶ:
ಅಕಾಲಿಕ ಆಲಿಕಲ್ಲು ಮಳೆಯಿಂದ ಈಗತಾನೇ ಹೂವು ಬಿಡುತ್ತಿದ್ದ ಮಾವು, ಹಲಸು, ಚಿಕ್ಕು, ಪಪ್ಪಾಯಿ, ಟೊಮೆಟೊ, ಎಲೆಕೋಸು, ಏಲಕ್ಕಿ ಸೇರಿದಂತೆ ಇತರೆ ಬೆಳೆಗಳಿಗೆ ಹಾನಿ ಉಂಟಾಗಿದ್ದು, ರೈತರು ಮತ್ತೊಂದು ಸಂಕಷ್ಟ ಎದುರಿಸುವಂತಾಗಿದೆ.
ಸಾಮಾನ್ಯವಾಗಿ ರೈತರು ಫೆಬ್ರವರಿ ತಿಂಗಳಿನಲ್ಲಿ ಕೊಯ್ಲು ಮಾಡಿದ ಬೆಳೆಯನ್ನು ಒಕ್ಕಣೆಗಾಗಿ ಸಿದ್ಧಪಡಿಸಿರುತ್ತಾರೆ. ಈ ಸಮಯದಲ್ಲೇ ಅಕಾಲಿಕ ಮಳೆ ಸುರಿದಿರುವುದರಿಂದ ರೈತರಿಗೆ ಸಾಕಷ್ಟು ನಷ್ಟ ಉಂಟಾಗಿದೆ.
ಒಟ್ಟಾರೆ, ಕಳೆದ ಬಾರಿ ಕೊರೊನಾ ಕಾರಣದಿಂದಾಗಿ ಬೆಳೆಗೆ ಉತ್ತಮ ಬೆಲೆ ಸಿಗದೇ ರೈತರ ಬದುಕು ಮೂರಾಬಟ್ಟೆಯಾಗಿತ್ತು. ಈ ನಡುವೆ ಈ ವರ್ಷ ಸುರಿದ ಅಕಾಲಿಕ ಮಳೆಯಿಂದಾಗಿ ಮಲೆನಾಡು ಮತ್ತು ಅರೆ ಮಲೆನಾಡು ಭಾಗದಲ್ಲಿನ ರೈತರ ಬೆಳೆಗಳು ಮಣ್ಣುಪಾಲಾಗಿವೆ.