ಹಾಸನ: ರಾಜ್ಯದ 12 ಜಿಲ್ಲೆಗಳಲ್ಲಿ ಒಟ್ಟು 35 ಸಾವಿರ ಕೋಟಿ ರೂ.ಗಳಷ್ಟು ನಷ್ಟವಾಗಿದೆ. ಆದರೆ ಇದುವರೆಗೂ ಒಂದು ಬಿಡಿಗಾಸು ಬಿಡುಗಡೆಯಾಗಿಲ್ಲ. ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ವಿಶ್ವಾಸ ಪಡೆಯುವುದರಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಕಿಡಿಕಾರಿದರು.
ಇವರ ಕೈಗೆ ಸರ್ಕಾರ ಕೊಟ್ಟಾಗಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಸರ್ಕಾರ ನಡೆಸುತ್ತಿದ್ದಾರೆ. ರಾಜ್ಯದ ಕೊಡಗು ಹಾಗೂ ಇತರೆಡೆ ಅತಿವೃಷ್ಟಿ ಆದಾಗ ಅಂದು ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ.ಕುಮಾರಸ್ವಾಮಿ ಕೂಡಲೇ ಪರಿಹಾರ ಹಣ ಬಿಡುಗಡೆ ಮಾಡಿದ್ದರು ಎಂದರು.
ಸರ್ಕಸ್ನಲ್ಲಿ ಹೆಣ್ಣುಮಕ್ಕಳು ತಂತಿ ಮೇಲೆ ನಡೆಯುವಂತೆ ಇಂದು ಬಿ.ಎಸ್.ಯಡಿಯೂರಪ್ಪ ಅವರಿಗೆ ಪರಿಸ್ಥಿತಿ ಬಂದಿದೆ. ನೆರೆ ಪರಿಹಾರ ಕಾರ್ಯ ನಿಭಾಯಿಸಲು ಸೋತ ಸರ್ಕಾರ, ಇದನ್ನು ಮರೆಮಾಚಲು ದೂರವಾಣಿ ಕದ್ದಾಲಿಕೆ ಹಾಗೂ ಇತರೆ ವಿವಾದವನ್ನು ಪ್ರಸ್ತಾಪ ಮಾಡುವ ಮೂಲಕ ಜನರ ದಾರಿ ತಪ್ಪಿಸುತ್ತಿದೆ ಎಂದು ದೂರಿದರು.
ಲೋಕಸಭಾ ಚುನಾವಣೆ ವೇಳೆ ರಾಜ್ಯದ ಮಂಡ್ಯ, ತುಮಕೂರು ಹಾಗೂ ಹಾಸನ ಲೋಕಸಭಾ ಕ್ಷೇತ್ರವನ್ನು ಗುರಿಯಾಗಿಸಿಕೊಂಡು ಕೇಂದ್ರ ಸರ್ಕಾರ ಬೇಹುಗಾರಿಕೆ ನಡೆಸಿತ್ತು. ಈ ಮೂಲಕ ಪ್ರಾದೇಶಿಕ ಜೆಡಿಎಸ್ ಪಕ್ಷವನ್ನು ತುಳಿಯಲು ಎರಡು ರಾಷ್ಟ್ರೀಯ ಪಕ್ಷಗಳು ಹುನ್ನಾರ ನಡೆಸಿದವು ಎಂದು ಹೆಚ್.ಡಿ.ರೇವಣ್ಣ ಗಂಭೀರ ಆರೋಪ ಮಾಡಿದರು.
ಯಾವುದೇ ಪಕ್ಷದಿಂದ ಜೆಡಿಎಸ್ ಪಕ್ಷವನ್ನು ತುಳಿಯಲು ಸಾಧ್ಯವಿಲ್ಲ. ದ್ವೇಷದ ರಾಜಕೀಯ ಮಾಡಲ್ಲ ಎಂದು ಯಡಿಯೂರಪ್ಪ ಹೇಳುತ್ತಾರೆ. ಆದರೆ ದಿನ ಬೆಳಗಾದರೆ ದೂರವಾಣಿ ಸೇರಿದಂತೆ ಹಲವು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಕಾಮಗಾರಿಗೆ ಬ್ರೇಕ್ ಹಾಕಿದ್ದಾರೆ. ಸಕಲೇಶಪುರದಲ್ಲಿ 20 ಸೇತುವೆ ಕಾಮಗಾರಿಗೆ ಬ್ರೇಕ್ ಹಾಕಿದ್ದಾರೆ. 20 ಕೋಟಿ ಕಾಮಗಾರಿಗೆ ತಡೆಯೊಡ್ಡಿದ್ದಾರೆ. ಬೇಲೂರಿನಲ್ಲಿ ಸೇತುವೆ ನಿರ್ಮಾಣಕ್ಕೆ ಮಂಜೂರಾಗಿದ್ದ ಕಾಮಗಾರಿಗೆ ತಡೆಯೊಡ್ಡಿದ್ದಾರೆ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಉದ್ಯೋಗ ಖಾತ್ರಿ ಯೋಜನೆಯ 63 ಕೋಟಿ ರೂ. ಬಿಡುಗಡೆಯಾಗಿಲ್ಲ. 19 ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಹಣ ಬಿಡುಗಡೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.