ಹಾಸನ: ಫೋನ್ ಟ್ಯಾಪಿಂಗ್ ಪ್ರಕರಣವನ್ನ ಸಿಬಿಐಗೆ ನೀಡಿರುವ ವಿಚಾರಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ಮಾಜಿ ಸಚಿವ ಹೆಚ್ ಡಿ ರೇವಣ್ಣ ಹರಿಹಾಯ್ದಿದ್ದು, ಯಾವುದೇ ತನಿಖೆ ಮಾಡಲಿ, ಹೆದರುವ ಜಾಯಮಾನ ನಮ್ಮದಲ್ಲ ಅಂತಾ ಸವಾಲ್ ಹಾಕಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯವರು ನಮ್ಮ ಫೋನ್ ಟ್ಯಾಪಿಂಗ್ ಮಾಡಿ, ಚುನಾವಣಾ ಸಂದರ್ಭದಲ್ಲಿ ನಮ್ಮ ಬೆಂಬಲಿಗರ ಮೇಲೆ ಐಟಿ ದಾಳಿ ಮಾಡಿಸಿದರು. ಕಾಂಗ್ರೆಸ್ ಮತ್ತು ಬಿಜೆಪಿ ಹೊಂದಾಣಿಕೆಯಿದೆ ಎಂಬುದಕ್ಕೆ ಸಿದ್ದರಾಮಯ್ಯ ಹೇಳಿದರು ಅಂತಾ ಪ್ರಕರಣವನ್ನು ಸಿಬಿಐಗೆ ವಹಿಸಿದ್ದೇ ಸಾಕ್ಷಿ. ಎರಡು ಪಕ್ಷದವರು ಏನು ಮಾಡ್ತಾರೆ ಮಾಡ್ಲಿ. ದೇವೇಗೌಡ್ರು ಎಲ್ಲಾ ತನಿಖೆಯನ್ನು ಎದುರಿಸಿ ಪ್ರಧಾನಿಯಾಗಲಿಲ್ಲವೇ? ಫೋನ್ ಕದ್ದಾಲಿಕೆ ಪ್ರಕರಣವೇ ಜೆಡಿಎಸ್‌ನ ಮುಂದಿನ ಭದ್ರಬುನಾದಿಯಾಗಲಿದೆ ಎಂದು ಭರವಸೆಯ ಮಾತುಗಳನ್ನಾಡಿದರು.
ಹಿಂದಿನ ಕಾಂಗ್ರೆಸ್ ಸರ್ಕಾರ ಮತ್ತು ಬಿಜೆಪಿ ಸರ್ಕಾರದಲ್ಲಿ ನಡೆದ ಫೋನ್ ಟ್ಯಾಪಿಂಗ್ ಪ್ರಕರಣವನ್ನು ತನಿಖೆ ಮಾಡಿಸಲಿ. ಕೆಲವರನ್ನು ಕುಮಾರಸ್ವಾಮಿ ನಂಬಿ ಕೆಟ್ಟ. ಅವನಿಗೆ ಕಳ್ಳಕಾಕರು ಯಾರೆಂದು ತಿಳಿಯದೆ ಎಲ್ಲರನ್ನೂ ನಂಬಿ ಬಿಟ್ಟ! ಅವನ ಭುಜಕ್ಕೆ ಭುಜ ಕೊಟ್ಟು ನಾನು ನಿಲ್ಲುತ್ತೇನೆ. ಬರೀ ಹಾಸನ ರಾಜಕಾರಣದಲ್ಲಿ ಮಾತ್ರ ಅಲ್ಲ, ನಾನೂ ಕೂಡ ಕುಮಾರಸ್ವಾಮಿಯವರ ಜೊತೆಯಲ್ಲಿ ರಾಜ್ಯ ಸುತ್ತುತ್ತೇನೆ ಎಂದರು.
ಕಳೆದ ಬಾರಿ ಕುಮಾರಸ್ವಾಮಿ ಬಜೆಟ್ ಮಂಡಿಸಿದಾಗ ಹಾಸನ, ರಾಮನಗರ ಮತ್ತು ಮಂಡ್ಯ ಬಜೆಟ್ ಎಂದು ಟೀಕಿಸಿದ್ದರು. ಈಗ ಶಿಕಾರಿಪುರ ಒಂದೇ ತಾಲೂಕಿಗೆ 850 ಕೋಟಿ ಹಣ ಬಿಡುಗಡೆ ಮಾಡಿದ್ದಾರೆ. ಇನ್ನು ಶಿವಮೊಗ್ಗ ಜಿಲ್ಲೆಗೆ 2,000 ಕೋಟಿ ಬಿಡುಗಡೆ ಮಾಡಿರುವ ಇವರು ಉತ್ತರ ಕರ್ನಾಟಕ ಪ್ರವಾಹ ಪರಿಹಾರಕ್ಕೆ ಖಜಾನೆಯಲ್ಲಿ ಹಣ ಇಲ್ಲ ಅಂತಾರೆ.
ಮುಂದೆ ನಾವೇನೂ ಸುಮ್ಮನೆ ಕೂರಲ್ಲ. ನಮಗೂ ಗೊತ್ತಿದೆ ಏನು ಮಾಡಬೇಕು ಅಂತಾ. ನಾನು ಈವರೆಗೆ ಜಿಲ್ಲೆಯ ರಾಜಕಾರಣ ಮಾಡುತ್ತಿದ್ದೆ. ಮುಂದೆ ರಾಜ್ಯದಲ್ಲಿ ರಾಜಕೀಯ ಪರ್ಯಟನೆ ಮಾಡುವ ಮೂಲಕ ದೇವೇಗೌಡರ ಮಕ್ಕಳು ಏನು ಎಂಬುದನ್ನು ತೋರಿಸುತ್ತವೆ ಅಂತಾ ಎರಡು ಪಕ್ಷಗಳಿಗೆ ಸವಾಲಾಗಿ ಪಂಚೆ ಕಟ್ಟಿ ಸುದ್ದಿಗೋಷ್ಠಿಯಿಂದ ಹೊರಟೇಬಿಟ್ಟರು.