ಹಾಸನ: ಕುಮಾರಸ್ವಾಮಿ ಸರ್ಕಾರದಲ್ಲಿ ಬಿಡುಗಡೆಯಾಗಿದ್ದ ಎಲ್ಲಾ ಕಾಮಗಾರಿಗೆ ಸರ್ಕಾರ ತಡೆಯೊಡ್ಡಿದ್ದು, ಅವುಗಳನ್ನು ಶೀಘ್ರವಾಗಿ ಮರು ಚಾಲನೆ ನೀಡದಿದ್ದರೇ ನಮ್ಮ ಪಕ್ಷದ 6 ಶಾಸಕರುಗಳು ಬೆಂಗಳೂರಿನ ಮುಖ್ಯಮಂತ್ರಿ ಮನೆಯ ಮುಂದೆ ಪ್ರತಿಭಟನೆ ನಡೆಸುವುದಾಗಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿಯವರ ಕಾಲದಲ್ಲಿ ಮಂಜೂರಾಗಿದ್ದ ಹಾಸನದ ಗ್ರೀನ್ ಏರ್ಪೋರ್ಟ್, ಚಿಕ್ಕಮಗಳೂರು-ಬೇಲೂರು ರೈಲ್ವೆ ಮಾರ್ಗ, 140 ಕೋಟಿ ವ್ಯಚ್ಚದಲ್ಲಿ ಸ್ಥಾಪನೆಯಾಗಬೇಕಿದ್ದ ನೂತನ ಬಂಧಿಖಾನೆ, ಗೊರೂರು-ಹೇಮಾವತಿ ಜಲಾಶಯದ ಅಚ್ಚುಕಟ್ಟು ವ್ಯಾಪ್ತಿಗೆ ಒಳಪಡುವ ಸಕಲೆಶಪುರ, ಅರಕಲಗೂಡು ಮತ್ತು ಹೊಳೆನರಸೀಪುರ ಕ್ಷೇತ್ರದ ಕೃಷಿ ಭೂಮಿಗೆ ನೀರುಣಿಸುವ ಕಾಮಗಾರಿ, ಹೊಸದಾಗಿ ತೋಟಗಾರಿಕೆ ಮಹಾವಿದ್ಯಾಲಯ ಸ್ಥಾಪಿಸಲು ಸರ್ಕಾರದ ಆದೇಶವಾದ್ದು, ಅದನ್ನು ನಮ್ಮ ಹಾಸನದ ಎಂಎಲ್ಎಂ ತಡೆಹಿಡಿದ್ದಾನೆ ಎಂದು ಶಾಸಕ ಪ್ರೀತಂಗೌಡ ಹೆಸರನ್ನು ಹೇಳದೇ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ : ಜೆಡಿಎಸ್ ಏನು ಎಂಬುದು ಜನವರಿ ನಂತರ ಗೊತ್ತಾಗಲಿದೆ: ಹೆಚ್.ಡಿ ರೇವಣ್ಣ
ಎಲ್ಲಾ ಕಾಮಗಾರಿಯೂ ಶುರುವಾಗಬೇಕು. ಅಷ್ಟರಲ್ಲಿ ಈ ಲೋಕಲ್ ಎಂಎಲ್ಎ ತಡೆಹಿಡಿಯಬೇಕೆಂದು ಲೆಟರ್ ಹೆಡ್ ಕೊಟ್ಟು ನಿಲ್ಲಿದ್ದಾನೆ. ವಿನಾ ಕಾರಣ ಯಾವುದಕ್ಕೋ ಹಣ ಖರ್ಚು ಮಾಡುವ ಬದಲು ಸರ್ಕಾರಿ ಶಾಲಾ ಕಾಲೇಜಿಗೆ ಬೆಂಚು, ಟೇಬಲ್ ಕೊಡಿ. ನಿಮ್ಮ ಮಕ್ಕಳಿಗೆ ಒಳ್ಳೆಯದಾಗಬೇಕೆಂದರೆ ಸರ್ಕಾರಿ ಶಾಲಾ-ಕಾಲೇಜಿಗೆ ಮೂಲಭೂತ ಸೌಕರ್ಯ ನೀಡಿ. ನಂತರ ಶಾಲೆ ತೆರೆಯುವ ಚಿಂತನೆ ಮಾಡಿ ಎಂದು ಟಾಂಗ್ ನೀಡಿದರು.
ದ್ವೇಷದ ರಾಜಕಾರಣ ಮಾಡುವುದನ್ನ ಬಿಡಬೇಕು. ತಡೆಹಿಡಿದಿರುವ ಹಾಸನದ ಕಾಮಗಾರಿಗಳನ್ನು ಮರುಚಾಲನೆ ಮಾಡದಿದ್ದರೇ ಜ.15ರ ನಂತರ ಶಾಸಕರೆಲ್ಲರೂ ಸೇರಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.