ಹಾಸನ: ನೋಡ್ರಿ, ಹಾಸನ ಕ್ಷೇತ್ರದ ಶಾಸಕ ಹಾಕಿದ್ದಾರಲ್ಲಾ ಆ ಸವಾಲನ್ನು ನಾನು ಸ್ವೀಕಾರ ಮಾಡುತ್ತೇನೆ. ಆದರೆ, ನಾನೇ ಚುನಾವಣೆಗೆ ನಿಲ್ಲುತ್ತೇನೆ ಅಂತಲ್ಲ. ಅವರ ಕ್ಷೇತ್ರದಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ, ಗೆಲ್ಲಿಸಿಕೊಂಡು ಬರ್ತಿವಿ ಎನ್ನುವ ಮೂಲಕ ಶಾಸಕ ಪ್ರೀತಂ ಗೌಡಗೆ ಮಾಜಿ ಸಚಿವ ಹೆಚ್ ಡಿ ರೇವಣ್ಣ ಪ್ರತಿ ಸವಾಲು ಹಾಕಿದ್ದಾರೆ.
ಸಂಸದ ಪ್ರಜ್ವಲ್ ರೇವಣ್ಣ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲಬೇಕು, ಆ ಸವಾಲನ್ನು ನಮ್ಮ ಪಕ್ಷ ಸ್ವೀಕಾರ ಮಾಡಿದ್ದು, ಯಾರನ್ನು ನಿಲ್ಲಿಸಬೇಕೆಂದು ಪಕ್ಷ ತೀರ್ಮಾನಿಸಲಿದೆ. ಹಾಸನ ಜಿಲ್ಲೆಯಲ್ಲಿ 25 ವರ್ಷ ಎಂಎಲ್‍ಎ ಆಗಿ ಕೆಲಸ ಮಾಡಿದ್ದು, ಅವರ ಸವಾಲು ಸ್ವೀಕರಿಸುತ್ತೇನೆ ಎಂದರು.
ಇದನ್ನೂ ಓದಿ: ಸಂಸದರಾದರೆ ಸಾಲದು ಸಂಸ್ಕಾರ ಇರಬೇಕು: ಪ್ರಜ್ವಲ್ ರೇವಣ್ಣಗೆ ಪ್ರೀತಂ ಗೌಡ ತಿರುಗೇಟು
ನಾನು ನಿಂತರೆ ಐವತ್ತು ಸಾವಿರ ಮತಗಳಿಂದ ಗೆಲ್ಲುತ್ತೇನೆ ಎಂದಿದ್ದಾರೆ. ಆದ್ರೆ, ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸುತ್ತೇವೆ. ಅವನು ಗೆದ್ದರೆ ಅವಾಗ ಏನು ಮಾಡುತ್ತಾರೆ?. ಲೀಡರ್ ರೇವಣ್ಣಂಗೆ 50 ಸಾವಿರ ಅಂದ್ರೆ, ಸಾಮಾನ್ಯನಿಗೆ 75 ಸಾವಿರ ಲೀಡ್ ಇಡುತ್ತಾರಾ?, ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಕೊಡುತ್ತೇವೆ, ಆಗ 75 ಸಾವಿರ ಮತಗಳ ಅಂತರದಲ್ಲಿ ಅವರು ಗೆಲ್ಲಬೇಕು, 75 ಸಾವಿರ ಬೇಡ, 55 ಸಾವಿರದಿಂದ ಗೆಲ್ಲಲಿ ಎಂದು ಪ್ರೀತಂ ಗೌಡ ಹೆಸರು ಹೇಳದೆ ಸವಾಲೊಡ್ಡಿದರು.
ಇದನ್ನೂ ಓದಿ: 'ಯಾವನ್ರೀ ಅವನು?..': ಶಾಸಕ ಪ್ರೀತಂ ಗೌಡ ವಿರುದ್ಧ ಪ್ರಜ್ವಲ್ ರೇವಣ್ಣ ಗರಂ
ಹಾಸನ ಜಿಲ್ಲೆಗೆ ಬಿಜೆಪಿ ಏನೇನು ಅನ್ಯಾಯ ಮಾಡಿದೆ ಅಂತಾ ದಾಖಲೆ ಸಮೇತ ಬಿಡುಗಡೆ ಮಾಡುತ್ತೇನೆ ಎಂದ ರೇವಣ್ಣ, ರಾಷ್ಟ್ರೀಯ ಪಕ್ಷಗಳು ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದಾರಾ?, ಎರಡು ರಾಷ್ಟ್ರೀಯ ಪಕ್ಷಗಳೇ ಒದ್ದಾಡುತ್ತಿವೆ. ರಾಷ್ಟ್ರೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಘೋಷಣೆ ಮಾಡಲಿ, ಅದನ್ನು ನೋಡಿಕೊಂಡು ನಮ್ಮ ಸಣ್ಣ ಪಕ್ಷದ ಅಭ್ಯರ್ಥಿಗಳನ್ನು ಘೋಷಣೆ ಮಾಡುತ್ತೇವೆ. ರೈಲಿಗೆ ಇಟ್ಟಿದ್ದ ಟಿಪ್ಪು ಹೆಸರನ್ನು ಏಕೆ ತೆಗೆಯಬೇಕಿತ್ತು, ಟಿಪ್ಪು ಕೂಡ ಈ ರಾಜ್ಯಕ್ಕೆ ಕೊಡುಗೆ ಕೊಟ್ಟಿದ್ದಾರೆ. ಬೇರೆ ರೈಲುಗಳಿಗೆ ಒಡೆಯರ್ ಹೆಸರಿಡಲಿ ಎಂದು ಪ್ರತಿಕ್ರಿಯೆ ನೀಡಿದ್ರು.