ಹಾಸನ: ಲಾಕ್ಡೌನ್ನಿಂದ ರಾಜ್ಯದಲ್ಲಿ ರೈತರು, ಕೂಲಿ ಕಾರ್ಮಿಕರು ಸಂಕಷ್ಟ ಎದುರಿಸುತ್ತಿದ್ದು, ಕಳೆದೊಂದು ತಿಂಗಳಿನಿಂದ ಮುಖ್ಯಮಂತ್ರಿ ನಿಧಿಗೆ ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳಿಂದ ಬಂದಿರುವ ದೇಣಿಗೆ ಮತ್ತು ಖರ್ಚು ಮಾಡಲಾಗಿರುವ ಹಣದ ವಿವರವನ್ನು ಬಹಿರಂಗಪಡಿಸುವಂತೆ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಸರ್ಕಾರವನ್ನ ಆಗ್ರಹಿಸಿದರು.
ನಗರದ ಪ್ರವಾಸಿಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮದು ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ಇಲ್ಲಿ ಸುಮಾರು 4 ಲಕ್ಷದ 35 ಸಾವಿರಕ್ಕೂ ಹೆಚ್ಚು ರೈತ ಕುಟುಂಬಗಳಿವೆ. ಅದರಲ್ಲಿ ಶೇ.88ರಷ್ಟು ಸಣ್ಣ ಮತ್ತು ಅತೀ ಸಣ್ಣ ರೈತ ಕುಟುಂಬಗಳಿವೆ. ಎರಡೂವರೆ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ, ರಾಗಿ, ಭತ್ತ, ದ್ವಿದಳ ಧಾನ್ಯಗಳು, ತಂಬಾಕು, ಕಬ್ಬು ಇತರ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಆದರೆ, ಹೇಮಾವತಿ ಜಲಾಶಯದಿಂದ ಮೇ 01ರ ನಂತರ ಹಾಸನ ಹಾಗೂ ಮಂಡ್ಯ ಜಿಲ್ಲೆಗೆ ನೀರು ಬಿಡುವುದಿಲ್ಲ ಎಂದು ಜಿಲ್ಲ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಹೇಳಿಕೆ ಸರಿಯಲ್ಲ. ನೀರು ಬಿಡುವ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ವಿಡಿಯೋ ಸಂವಾದದಲ್ಲಿ ಚನ್ನರಾಯಪಟ್ಟಣ ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ ಅವರ ಪ್ರಶ್ನೆಗೆ ಸಚಿವ ಮಾಧುಸ್ವಾಮಿ ಅವರು ಹಾಸನ ಮತ್ತು ಮಂಡ್ಯ ಜಿಲ್ಲೆಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಜಲಾಶಯದ ಎಲ್ಲ ನಾಲೆಗಳ ಬಿಗಿ ಭದ್ರತೆಗೆ ಪೊಲೀಸರನ್ನು ನಿಯೋಜಿಸಲಾಗಿದೆ. ನೀರು ಬಿಡಲು ಬಂದವರನ್ನು ಬಂಧಿಸಿ ಎಂದು ಆದೇಶ ನೀಡಲಾಗಿದೆ. ಈ ರೀತಿಯ ತಾರತಮ್ಯ ಸರಿಯಲ್ಲ. ತುಮಕೂರು, ಹಾಸನ, ಮಂಡ್ಯ, ಮೈಸೂರು ಜಿಲ್ಲೆಗಳ ರೈತರ ಹಿತ ಕಾಪಾಡುವುದು ನನಗೆ ಮುಖ್ಯ. ನಾನು ಯಾರಿಗೂ ಪ್ರಚೋದನೆ ಮಾಡುತ್ತಿಲ್ಲ ಎಂದು ತಿಳಿಸಿದರು.
ಸೋಮವಾರ ಬೆಂಗಳೂರಿಗೆ ತೆರಳಿ ನೀರಾವರಿ ಇಲಾಖೆಯ ಕಾರ್ಯದರ್ಶಿಯನ್ನು ಭೇಟಿ ಮಾಡಿ ಈ ವಿಷಯವಾಗಿ ಚರ್ಚಿಸುತ್ತೇನೆ. ಕಾವೇರಿ ಟ್ರಿಬ್ಯೂನಲ್ನಲ್ಲಿ ಏನಿದೆ. ಅದರ ಆದೇಶ ಪಾಲನೆ ಮಾಡುತ್ತಿದ್ದಾರೆಯೇ ಎಂಬುದರ ಕುರಿತು ಪ್ರಶ್ನೆ ಮಾಡಲಾಗುವುದು. ಯಾವ ಯಾವ ಕಾಲದಲ್ಲಿ ಯಾವ ಯಾವ ಜಿಲ್ಲೆಗೆ ಎಷ್ಟೆಷ್ಟು ನೀರು ನೀಡಲಾಗಿದೆ ತಿಳಿಸಲಿ ಎಂದರು.
ಸಚಿವ ಮಾಧುಸ್ವಾಮಿ ಅವರು ಕಳೆದ ಬಾರಿ ಜಿಲ್ಲೆಗೆ ಬಂದಾಗ ಈ ಬಗ್ಗೆ ಪ್ರಸ್ತಾಪ ಮಾಡಲಾಗಿತ್ತು. ಆ ವೇಳೆ ನೀರು ಬಿಡುವುದಾಗಿ ಒಪ್ಪಿಕೊಂಡಿದ್ದರು. ಆದರೆ ಈಗ ನೀರು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಈ ಬಾರಿ ಜಲಾಶಯದಲ್ಲಿ ಸಾಕಷ್ಟು ನೀರಿದ್ದು, ಎಲ್ಲ ಜಿಲ್ಲೆಗಳಿಗೂ ನೀರು ಬಿಡಬೇಕು ಎಂದು ಒತ್ತಾಯಿಸಿದರು.
ಹೇಮಾವತಿ ಜಲಾಶಯ ಒಟ್ಟು 6.55 ಲಕ್ಷ ಎಕರೆ ಅಚ್ಚುಕಟ್ಟು ಪ್ರದೇಶ ಹೊಂದಿದ್ದು, ತುಮಕೂರು ಜಿಲ್ಲೆ 3.14 ಲಕ್ಷ ಸಾವಿರ ಎಕರೆ ಅಚ್ಚುಕಟ್ಟು, ಹಾಸನ 2.27 ಲಕ್ಷ ಎಕರೆ ಅಚ್ಚುಕಟ್ಟು, ಮೈಸೂರು 5,600 ಎಕರೆ ಪ್ರದೇಶ ಅಚ್ಚುಕಟ್ಟು ಹೊಂದಿದೆ ಎಂದು ಮಾಹಿತಿ ನೀಡಿದರು.
ಬೆಂಗಳೂರಿನ ಪಾದರಾಯನಪುರದಲ್ಲಿ ದಾಂದಲೆ ನಡೆಸಿದ ಆರೋಪಿಗಳಿಗೆ ಕೊರೊನಾ ಪಾಸಿಟಿವ್ ಇರುವ ವಿಷಯ ತಿಳಿದಿತ್ತು. ಅವರನ್ನು ರಾಮನಗರ ಜಿಲ್ಲೆಗೆ ಸ್ಥಳಾಂತರಿಸಿರುವುದರ ಹಿಂದೆ ರಾಜಕೀಯ ದುರುದ್ದೇಶ ಅಡಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಮನಗರ ಜೈಲಿನ ಅಧಿಕಾರಿ ವಿರುದ್ಧ ಸೂಕ್ತ ತನಿಖೆ ನಡೆಸಿ ಆತನ ವಿರುದ್ಧ ಕ್ರಮ ಜರುಗಿಸಬೇಕು. ಆರೋಪಿಗಳಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ. ಯಾವುದಾದರೂ ನಿರ್ಜನ ಪ್ರದೇಶದಲ್ಲಿ ಅವರನ್ನು ಇರಿಸಬಹುದಿತ್ತು. ರಾಮನಗರ ಜಿಲ್ಲೆಯಲ್ಲಿ ಈವರೆಗೆ ಕೊರೊನಾ ಸೋಂಕಿತರು ಪತ್ತೆಯಾದ ಪರಿಣಾಮ ಹಸಿರು ವಲಯದಲ್ಲಿತ್ತು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಂಪೂರ್ಣ ಬೆಂಬಲ ನೀಡಿದ್ದಾರೆ. ಆದರೆ ಜಗದೀಶ್ ಶೇಟ್ಟರ್ ಅವರು ಅಧಿಕಾರ ಇದೆ ಎಂದು ದರ್ಪದಿಂದ, ಲಘುವಾಗಿ ಮಾತನಾಡಬಾರದು ಎಂದರು.
ಕಾಂಗ್ರೆಸ್ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೂಡಲೇ ವಿಪಕ್ಷಗಳ ನಾಯಕರ ಸಭೆ ಕರೆದು ರಾಜ್ಯದಲ್ಲಿ ಲಾಕ್ಡೌನ್ನಿಂದಾಗಿ ಹಾನಿಯಾಗಿರುವ ಕೃಷಿ, ತೋಟಗಾರಿಕೆ ಬೆಳೆಗಳು, ಬೀದಿ ಬದಿ ವ್ಯಾಪಾರಿಗಳು, ಕೂಲಿ ಕಾರ್ಮಿಕರು, ನಿರ್ಗತಿಕರಿಗೆ ಸರಿಯಾಗಿ ಆಹಾರ ಪದಾರ್ಥಗಳನ್ನು ವಿತರಿಸಲಾಗುತ್ತಿದೆಯೇ ಎಂದು ಚರ್ಚಿಸಲು ಸಿಪಿಐ, ಸಿಪಿಎಂ ಸೇರಿದಂತೆ ಎಲ್ಲಾ ವಿರೋಧ ಪಕ್ಷಗಳ ಸಭೆ ಕರೆದು ನಿರ್ಣಯ ಕೈಗೊಂಡು ಸರ್ಕಾರದ ಮೇಲೆ ಒತ್ತಡ ಹೇರಬೇಕಿದೆ ಎಂದರು.
ರಾಜ್ಯದಲ್ಲಿ ಕೊವಿಡ್-19 ಹಿನ್ನೆಲೆ ಲಾಕ್‌ಡೌನ್ ಜಾರಿಯಾದ ನಂತರ ಎಷ್ಟು ಹಣ ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆಯಾಗಿ ಬಂದಿದೆ. ಅದನ್ನು ಯಾವ ಕೆಲಸಗಳಿಗೆ ವಿನಿಯೋಗಿಸಲಾಗಿದೆ ಎಂದು ಮಾಹಿತಿ ಕೇಳಿ ಮುಖ್ಯಮಂತ್ರಿ ಪರಿಹಾರ ನಿಧಿ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ. ಈ ಬಗ್ಗೆ ಸಾರ್ವಜನಿಕರ ಮುಂದೆ ಬಹಿರಂಗಪಡಿಸಲಿ ಎಂದು ಹೇಳಿದರು.