ಹಾಸನ: ವಿಶ್ವವಿಖ್ಯಾತ ಮೈಸೂರು ದಸರಾ ನಂತರ ಹಾಸನಾಂಬೆ ದೇವಾಲಯದ ಬಾಗಿಲು ತೆರೆದು ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತೆ. ವರ್ಷಕ್ಕೊಮ್ಮೆಯಷ್ಟೇ ದರ್ಶನ ಭಾಗ್ಯ ಕರುಣಿಸುವ ಹಾಸನದ ಅಧಿದೇವತೆ ಹಾಸನಾಂಬೆ ದೇವಾಲಯದ ಬಾಗಿಲು ನಾಳೆಯಿಂದ ನವೆಂಬರ್ 16ರವರೆಗೆ ತೆರೆಯಲಿದ್ದು, ದೇವಿಯ ದರ್ಶನದ ನಿರೀಕ್ಷೆಯಲ್ಲಿದ್ದ ಭಕ್ತರಿಗೆ ನಿರಾಸೆ ಉಂಟಾಗಿದೆ.
ಹಲವು ಪವಾಡಗಳಿಗೆ ಹೆಸರುವಾಸಿಯಾದ ಹಾಸನಾಂಬೆ ದೇವರ ದರ್ಶನದ ವಿಷಯದಲ್ಲಿ ಜಿಲ್ಲಾಡಳಿತ ತೆಗೆದುಕೊಂಡ ನಿರ್ಧಾರ ಜನಪ್ರತಿನಿಧಿಗಳ ಟೀಕೆಗೆ ಕಾರಣವಾಗಿದೆ. ಅಶ್ವಯುಜ ಮಾಸದ ಹುಣ್ಣಿಮೆ ನಂತರದ ಮೊದಲನೇ ಗುರುವಾರ ಹಾಸನಾಂಬೆ ದೇವಿಯ ಗರ್ಭಗುಡಿ ಬಾಗಿಲು ತೆಗೆಯಲಾಗುತ್ತೆ. ನಂತರ ಬಲಿ ಪಾಡ್ಯಮಿಯ ಮಾರನೇಯ ದಿನ ದೇವಿಯ ಬಾಗಿಲು ಮುಚ್ಚಲಾಗುತ್ತೆ.
ಈ ಬಾರಿ ಕೊರೊನಾ ಇರುವ ಕಾರಣದಿಂದಾಗಿ ಸಾರ್ವಜನಿಕ ದರ್ಶನ ಇರುವುದಿಲ್ಲ. ನಾಳೆ ಮಧ್ಯಾಹ್ನ 12 ಗಂಟೆಗೆ ದೇವಾಲಯದ ಬಾಗಿಲು ತೆರೆಯಲಿದ್ದು, ಸ್ಥಳೀಯ ಜನಪ್ರತಿನಿಧಿಗಳು ಮತ್ತು ಪ್ರಮುಖ ಆಹ್ವಾನಿತ ಗಣ್ಯರಿಗೆ ಮಾತ್ರ ಪ್ರವೇಶವಿರುತ್ತದೆ. ಉಳಿದಂತೆ ಯಾವುದೇ ಸಾರ್ವಜನಿಕ ದರ್ಶನ ಇರುವುದಿಲ್ಲ. ಭಕ್ತರಿಗೆ ಪ್ರಸಾದದ ವ್ಯವಸ್ಥೆಯೂ ಇರುವುದಿಲ್ಲ.
ನವೆಂಬರ್ 16ರವರೆಗೆ ದೇವಾಲಯದ ಬಾಗಿಲು ತೆರೆಯಲಿದ್ದು, ಅಂದು ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ದೇವಾಲಯದ ಬಾಗಿಲು ಮುಚ್ಚಲಿದೆ. ಈ ಬಾರಿ ಯಾವುದೇ ಸಾರ್ವಜನಿಕ ದರ್ಶನ ಇರುವುದಿಲ್ಲ. ಅದಕ್ಕಾಗಿ ಜಿಲ್ಲಾಡಳಿತ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ಹಾಸನ ನಗರದ 10 ಕಡೆ ಎಲ್ಇಡಿ ಪರದೆ ಹಾಕಿ ಆನ್ಲೈನ್ ಮೂಲಕ ದರ್ಶನಕ್ಕೆ ವ್ಯವಸ್ಥೆ ಮಾಡಿದೆ. ಅದರ ಜೊತೆಗೆ ಯುಟ್ಯೂಬ್‌ನಲ್ಲೂ ಪೂಜಾ ವಿಧಿ-ವಿಧಾನ ವೀಕ್ಷಿಸಬಹುದಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಆನ್ಲೈನ್ ದರ್ಶನ ಮಾಡುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.
ಹಾಸನಾಂಬೆ ದೇವಾಲಯದಲ್ಲಿ ಕಳೆದ ವರ್ಷ ಗರ್ಭಗುಡಿಯಲ್ಲಿ ಬಾಗಿಲು ಮುಚ್ಚುವ ಮುನ್ನ ಹಚ್ಚಿಟ್ಟ ಹಣತೆ ಆರುವುದಿಲ್ಲ. ಹೂ ಬಾಡುವುದಿಲ್ಲ, ಎಡೆ ಹಳಸುವುದಿಲ್ಲ ಎಂಬಿತ್ಯಾದಿ ನಂಬಿಕೆ ಇದೆ. ಹೀಗಾಗಿ ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನಾಂಬೆ ದರ್ಶನಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಆದರೆ ಈ ಬಾರಿ ಕೊರೊನಾ ನೆಪ ಹೇಳಿ ಜಿಲ್ಲಾಡಳಿತ ಸಾರ್ವಜನಿಕರಿಗೆ ನೇರ ದರ್ಶನ ನಿಷೇಧಿಸಿರುವ ನಡೆಗೆ ಮಾಜಿ ಸಚಿವ ರೇವಣ್ಣ ಆಕ್ರೋಶ ಹೊರಹಾಕಿದ್ದಾರೆ.
ಕಳೆದ ಬಾರಿ 5 ಲಕ್ಷ ಮಂದಿ ದೇವಿಯ ದರ್ಶನ ಪಡೆದಿದ್ದರು. ಆದರೆ ಈ ಬಾರಿ ಕೊರೊನಾ ಇರುವ ಕಾರಣದಿಂದಾಗಿ ಜಿಲ್ಲಾಡಳಿತ ಸಾರ್ವಜನಿಕ ದರ್ಶನಕ್ಕೆ ಬ್ರೇಕ್ ಹಾಕಿದೆ.