ಚನ್ನರಾಯಪಟ್ಟಣ: 'ಹಾಸನದವರು ಸರ್ಕಾರದಿಂದ ಎಷ್ಟು ಚೆನ್ನಾಗಿ ಕೆಲಸ ಮಾಡಿಸುತ್ತಾರೆ, ಅವರ ಬುದ್ಧಿಯನ್ನು ನಮಗೂ ಒಂದಿಷ್ಟು ಕೊಡಪ್ಪ ಅಂತ ದೇವರಲ್ಲಿ ಕೇಳುತ್ತೇನೆ' ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಚನ್ನರಾಯಪಟ್ಟಣ ತಾಲೂಕು ನುಗ್ಗೆಹಳ್ಳಿಯಲ್ಲಿ ಏತ ನೀರಾವರಿ ಯೋಜನೆಯಡಿ ಕೆರೆಗೆ ನೀರು ಹರಿಸಿ ಬಳಿಕ ಮಾತನಾಡಿದ ಅವರು, ಹಾಸನದವರು ಸಾಕಷ್ಟು ಬುದ್ಧಿವಂತರು. ಅವರಿಗಿರುವ ಬುದ್ಧಿ ನನಗೂ ಒಂದಿಷ್ಟು ಕೊಡಪ್ಪ ಅಂತ ದೇವರಲ್ಲಿ ಕೇಳಿಕೊಳ್ಳುತ್ತೇನೆ. ಕಾರಣ ಸರ್ಕಾರದ ಯಾವುದೇ ಕೆಲಸ, ಕಾಮಗಾರಿ ಇರಲಿ ಎಷ್ಟು ಚೆನ್ನಾಗಿ ತಗೋತಾರೆ ಅಂದ್ರೆ ನಾವು ತುಮಕೂರು ಜಿಲ್ಲೆಯವರು ಸುಮ್ಮನೆ ಕುಳಿತು ದಡ್ಡರಾಗಿದ್ದೇವೆ ಎಂದು ನಗೆ ಚಟಾಕಿ ಹಾರಿಸಿದರು.
ನಾನೂ ಒಬ್ಬ ರೈತನ ಮಗ. ರೈತನ ಪರಿಸ್ಥಿತಿಯನ್ನು ಹತ್ತಿರದಿಂದ ಕಂಡಿದ್ದೇನೆ. ತಾಲೂಕಿನ ನೀರಾವರಿ ಯೋಜನೆಗೆ ಶ್ರಮಿಸಿದ ಯಾರನ್ನೂ ಕೂಡ ಮರೆಯಬಾರದು. ಕೆರೆ ತುಂಬಿದ ಬಳಿಕ ಸರ್ಕಾರದ ಮಟ್ಟದಲ್ಲಿ ಕಾರ್ಯಕ್ರಮ ಏರ್ಪಡಿಸಿ ಬಸವರಾಜ್ ಬೊಮ್ಮಾಯಿ ಹಾಗೂ ಸಿಎಂ ಯಡಿಯೂರಪ್ಪನವರನ್ನು ಆಹ್ವಾನಿಸಿ ಅವರಿಗೆ ಅಭಿನಂದನೆ ಸಲ್ಲಿಸಬೇಕು. ಆ ಕೆಲಸ ಮಾಡುತ್ತೇನೆ ಎಂದರು.