ಸಕಲೇಶಪುರ(ಹಾಸನ): ಅನಾರೋಗ್ಯದ ಕಾರಣ ಶನಿವಾರ ಸಂಜೆ ಮೈಸೂರಿನ ಜೆ.ಎಸ್.ಎಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ತಾಲೂಕಿನ ಯಸಳೂರು ಹೋಬಳಿಯ ತೆಂಕಲಗೋಡು ಮಠದ ಚನ್ನಮಲ್ಲಿಕಾರ್ಜುನ ಸ್ವಾಮೀಜಿಗಳ ಗದ್ದುಗೆ ಕಾರ್ಯಕ್ರಮ ಗ್ರಾಮದಲ್ಲಿರುವ ಪೀಠದಲ್ಲೇ ವೀರಶೈವ ವಿಧಿವಿಧಾನದಲ್ಲಿ ನಡೆಯಿತು.
ಸ್ವಾಮೀಜಿ ನಡೆದು ಬಂದ ಹಾದಿ...
ಸಕಲೇಶಪುರ ತಾಲೂಕಿನ ಏಕೈಕ ಮಠ ಹಾಗೂ ರಂಭಾಪುರಿ ಮಠದ ಶಾಖಾ ಮಠವಾಗಿದ್ದ ತೆಂಕಲಗೋಡು ಮಠದಲ್ಲಿ, ಕಳೆದ 40 ವರ್ಷಗಳಿಂದ ಪೀಠಾಧ್ಯಕ್ಷರಾಗಿದ್ದ ಚನ್ನಮಲ್ಲಿಕಾರ್ಜುನ ಸ್ವಾಮೀಜಿಗಳು ಸೇವೆ ಸಲ್ಲಿಸಿದ್ದಾರೆ. ಇವರು ಮೂಲತಃ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಬಂಕಾಪುರ ಗ್ರಾಮದವರು. ಎಸ್ಎಸ್ಎಲ್ಸಿವರೆಗೂ ಗ್ರಾಮದಲ್ಲೇ ಶಿಕ್ಷಣ ಮುಗಿಸಿದ ಇವರು ನಂತರ ಎಂಎ, ಎಂಎಡ್ ಫಿಲೋಸಫಿವರೆಗೆ ಬೆಂಗಳೂರಿನಲ್ಲಿರುವ ರಂಭಾಪುರಿ ಮಠದ ಶಾಖಾಮಠದಲ್ಲಿದ್ದುಕೊಂಡು ಅಭ್ಯಸಿಸಿದರು.
ಈ ಸಂದರ್ಭದಲ್ಲಿ ಚನ್ನಮಲ್ಲಿಕಾರ್ಜುನ ಶ್ರೀಗಳ ಪಾಂಡಿತ್ಯವನ್ನು ಕಂಡು ತಾಲೂಕಿನ ಯಸಳೂರಿನ ಶಿವಾಚಾರ್ಯ ಸ್ವಾಮೀಜಿ ಮಠದ ಉತ್ತರಾಧಿಕಾರಿಗಳಾಗಲು ಆಹ್ವಾನಿಸಿದ್ದರಂತೆ. ಈ ಹಿನ್ನೆಲೆಯಲ್ಲಿ ಕಳೆದ 40 ವರ್ಷಗಳ ಹಿಂದೆ ಪೀಠ ಅಲಂಕರಿಸಿದ ಶ್ರೀಗಳು ಏನೂ ಇಲ್ಲದ ಮಠವನ್ನು ಅಭಿವೃದ್ದಿಯ ಪಥಕ್ಕೆ ಕೊಂಡೊಯ್ದಿದಿದ್ದರು. ಉತ್ತಮ ಪಾಂಡಿತ್ಯ ಹೊಂದಿದ್ದ ಸ್ವಾಮೀಜಿಗಳಿಗೆ ನಿರೀಕ್ಷೆಯಷ್ಟು ಜನ ಬೆಂಬಲ ಸಿಗಲಿಲ್ಲ. ಆದರೂ ಸಹ ರಾಜ್ಯದೆಲ್ಲೆಡೆ ಪ್ರವಾಸ ಮಾಡುತ್ತಿದ್ದ ಇವರು ಧರ್ಮದ ಕುರಿತು ಸುದೀರ್ಘವಾಗಿ ಉಪನ್ಯಾಸ ನೀಡುತ್ತಿದ್ದರು.
ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ಭಾಗವಹಿಸುತ್ತಿದ್ದರು. ರಾಮ ಮಂದಿರ ನಿರ್ಮಾಣವಾಗಬೇಕೆಂದು 80 ರ ದಶಕದಲ್ಲೇ ಹೋರಾಟಗಳಲ್ಲಿ ಭಾಗಿಯಾಗಿದ್ದರು. ವೀರಶೈವ ಲಿಂಗಾಯತ ವಿಭಜನೆ ಕೇಳಿ ಬಂದಾಗ ವೀರಶೈವ ಲಿಂಗಾಯಿತ ಎರಡು ಒಂದೇ ಎಂದು ಪ್ರತಿಪಾದಿಸಿದ್ದರು.
ಇನ್ನು ಮಠದ ಮುಂದಿನ ಪೀಠಾಧಿಕಾರಿಯಾಗಿ ಸ್ವಾಮೀಜಿಯ ಕುಟುಂಬ ವರ್ಗದವರು ಆಗಬಾರದೆಂದು ಕೆಲವು ಸ್ಥಳೀಯರ ಬಯಕೆಯಾಗಿತ್ತು. ಆದರೆ ಬಾಳೆಹೊನ್ನೂರಿನ ರಂಭಾಪುರಿ ಶ್ರೀಗಳು ಚನ್ನಮಲ್ಲಿಕಾರ್ಜುನ ಶ್ರೀಗಳ ಆಶಯದಂತೆ ಉಜ್ಜಯಿನಿ ಶಾಖಾ ಮಠದ ಆದೇಶದಂತೆ ಅವರ ತಮ್ಮನ ಮಗ 28 ವರ್ಷ ವಯಸ್ಸಿನ ಪೂರ್ಣಚಂದ್ರ ದೇವರು ಪೀಠಾಧೀಶರಾಗಲಿದ್ದಾರೆ ಎಂದು ಹೇಳಿದ್ದರಿಂದ ಯಾವುದೇ ಗೊಂದಲವಿಲ್ಲದೆ ಮಠಕ್ಕೆ ಉತ್ತರಾಧಿಕಾರಿ ಆಯ್ಕೆಯಾಯಿತು.
ಸ್ವಾಮೀಜಿಗಳ ಗದ್ದುಗೆ ಕಾರ್ಯಕ್ರಮದಲ್ಲಿ ಬಾಳೆಹೊನ್ನೂರಿನ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕಾಚಾರ್ಯ ಸ್ವಾಮೀಜಿ, ಕಾಡಸಿದ್ದೇಶ್ವರ ಮಠ ನೊಣವಿನಕೆರೆ ಶಿವಾನುಭವ ಚರವರ್ಯ ಕರಿ ವೃಷಭ ದೇಶಿಕೇಂದ್ರ ಸ್ವಾಮೀಜಿ, ಯಡಿಯೂರಿನ ರೇಣುಕಾರಾಧ್ಯ ಸ್ವಾಮೀಜಿ, ಹಾಸನದ ಆದಿಚುಂಚನಗಿರಿ ಮಠದ ಶಂಭುನಾಥ ಸ್ವಾಮೀಜಿ, ಕಾರ್ಜುವಳ್ಳಿ ಮಠದ ಶಂಭುಲಿಂಗ ಸ್ವಾಮೀಜಿ, ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ಕಲ್ಮಠದ ಮಹಾಂತ ಸ್ವಾಮೀಜಿ, ಚಿಕ್ಕಮಗಳೂರು ಶಾಂತದೇವರ ಮಠದ ಚಂದ್ರಶೇಖರ ಸ್ವಾಮೀಜಿ , ಮಾಜಿ ಸಚಿವ ಎ.ಮಂಜು, ಶಾಸಕ ಎಚ್.ಕೆ ಕುಮಾರಸ್ವಾಮಿ, ಬೇಲೂರು ಶಾಸಕ ಲಿಂಗೇಶ್, ಮಾಜಿ ಶಾಸಕ ಎಚ್.ಎಂ ವಿಶ್ವನಾಥ್ ಸೇರಿದಂತೆ ರಾಜ್ಯದ ಹಲವು ಮಠಾಧೀಶರು ಭಾಗವಹಿಸಿದ್ದರು.