ಹಾಸನ: ದೇಶಾದ್ಯಂತ ಕೊರೊನಾ ಸಾಂಕ್ರಾಮಿಕ ರೋಗವು ಹೆಚ್ಚಿನ ರೀತಿಯಲ್ಲಿ ಹರಡುತ್ತಿದ್ದು, ಇದನ್ನು ತಡೆಗಟ್ಟಲು ಸರ್ಕಾರವು ಲಾಕ್‌ಡೌನ್ ಆದೇಶವನ್ನು ನೀಡಿದೆ ಅದರಂತೆ ಜಿಲ್ಲೆಯ ಪ್ರತಿಯೊಬ್ಬ ಸಾರ್ವಜನಿಕರು ಅಗತ್ಯ ವಸ್ತಗಳನ್ನು ಖರೀದಿ ಮಾಡಬೇಕು. ಅನಗತ್ಯವಾಗಿ ಓಡಾಡದಂತೆ ಕಡಿವಾಣ ಹಾಕಿಕೊಳ್ಳ ಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಮನವಿ ಮಾಡಿದರು.
ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಸಾರ್ವಜನಿಕರ ಹಿತದೃಷ್ಟಿಗೆ ವೇಳಾಪಟ್ಟಿಯನ್ನು ನಿಗದಿಪಡಿಲಾಗಿದ್ದು, ಸಾರ್ವಜನಿಕರು ನಿಗದಿ ಪಡಿಸಿದ ಭಾನುವಾರ, ಮಂಗಳವಾರ, ಗುರುವಾರ, ಶನಿವಾರ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ದಿನಸಿ ಅಂಗಡಿಗಳು, ಮಾಲ್‌ಗಳು, ತರಕಾರಿ, ಪೇಪರ್, ಹಾಲು, ಪೆಟ್ರೋಲ್ ಬಂಕ್ ಇನ್ನಿತರ ಅವಶ್ಯಕತೆ ಇರುವ ಅಂಗಡಿಗಳು ತೆರೆಯಲಾಗುತ್ತದೆ. ಸೋಮವಾರ, ಬುಧವಾರ, ಶುಕ್ರವಾರ ಬೆಳಗ್ಗೆ 6 ರಿಂದ 8 ರವರಗೆ ಹಾಲು ಮತ್ತು ಪೇಪರ್ ತೆಗೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದರು.
ನಿತ್ಯ ಬೆಳಗ್ಗೆಯಿಂದ ರಾತ್ರಿಯವರಗೆ ಮೆಡಿಕಲ್ ಸ್ಟೋರ್ ಮತ್ತು ಕ್ಲಿನಿಕ್‌ಗಳು ಜಿಲ್ಲೆಯ ನಗರ ವ್ಯಾಪ್ತಿಯಲ್ಲಿ 2 ಪೆಟ್ರೋಲ್ ಬಂಕ್‌ಗಳು ಬೆಳಗ್ಗೆಯಿಂದ ರಾತ್ರಿಯವರಗೆ ಮಾತ್ರ ತೆರೆದಿರುತ್ತವೆ. ಹೋಟೆಲ್‌ಗಳು ಹೋಂ ಡೆಲಿವರಿ ಮಾತ್ರ ನೀಡಬೇಕು ಎಂದು ತಿಳಿಸಿದರು. ಕೆಲವರು ವಸ್ತುಗಳ ಖರೀದಿ ನೆಪದಲ್ಲಿ ಮೋಜು-ಮಸ್ತಿ ಮಾಡುತ್ತಿದ್ದಾರೆ. ಅಂತಹವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.