ಹಾಸನ : ನಗರದ ಹೊಸ ಬಸ್ ನಿಲ್ದಾಣದ ಎದುರು ನಡೆಯುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿ ಪ್ರಾರಂಭವಾಗಿ 11 ತಿಂಗಳು ಕಳೆದರೂ ಇನ್ನು ಫಿಲ್ಲರ್ ಹಂತದಲ್ಲೇ ಇದೆ. ಒಟ್ಟು 44 ಕೋಟಿ ರೂ. ವೆಚ್ಚದ ಈ ಕಾಮಗಾರಿಯನ್ನು 18 ತಿಂಗಳಲ್ಲಿ ಮುಗಿಸಲು ಜಿಲ್ಲಾಡಳಿತ ಗಡುವು ನೀಡಿದೆ. ಆದ್ದರಿಂದ ತ್ವರಿತವಾಗಿ ಕೆಲಸ ನಡೆಯದ್ದಿದ್ದರೆ ದಶಕದವರೆಗೆ ಕಾಮಗಾರಿ ಪೂರ್ಣಗೊಳ್ಳಲು ಸಾಧ್ಯವಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಶಕಗಳ ಹೋರಾಟದ ಫಲವಾಗಿ ಈ ಮೇಲ್ಸೇತುವೆ ಕಾಮಗಾರಿ ಆರಂಭವಾಗಿದೆ. ಆರಂಭದಲ್ಲಿ ಅಧಿಕ ಸಂಖ್ಯೆಯ ಕಾರ್ಮಿಕರು ಹಾಗೂ ಯಂತ್ರೋಪಕರಣಗಳಿಂದ ವೇಗವಾಗಿ ಕೆಲಸ ನಡೆಯುತ್ತಿತ್ತು. ಈ ನಡುವೆ ಇಂಜಿನಿಯರ್‌ಗಳ ನಿರ್ಲಕ್ಷ್ಯದಿಂದ ಕಳೆದ ಮಾರ್ಚ್ 12 ರಂದು ಮೇಲ್ಸೇತುವೆಯ ನಾಲ್ಕು ಕಂಬಗಳು ಕುಸಿದು ಬಿದ್ದಿತ್ತು. ಆ ಬಳಿಕ ಕಾಮಗಾರಿಗೆ ಗ್ರಹಣ ಹಿಡಿದಿದೆ. ಐದಾರು ಕಾರ್ಮಿಕರು ಒಂದು ಹಿಟಾಚಿಯಿಂದ ಮಾತ್ರ ಕೆಲಸ ನಡೆಯುತ್ತಿದೆ. ರೈಲ್ವೆ ಇಲಾಖೆಯೇ ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ ಸ್ಥಳೀಯಾಡಳಿತ ಮತ್ತು ಜನಪ್ರತಿನಿಧಿಗಳು ಆ ಕಡೆಗೆ ಗಮನ ಹರಿಸುತ್ತಿಲ್ಲ.
ಅವಸರದ ಕೆಲಸ ಕೈಗೊಂಡ ಪರಿಣಾಮ ಕಂಬಗಳು ಕುಸಿದು ಅವಘಡ ಸಂಭವಿಸಿತು. ತಾಂತ್ರಿಕವಾಗಿ ಸಾಕಷ್ಟು ಎಚ್ಚರಿಕೆ ವಹಿಸಿ ಕೆಲಸ ಮಾಡಬೇಕಿದೆ. ಕಾಮಗಾರಿ ಬೇಗ ಮುಗಿಯಬೇಕು ಎನ್ನುವುದರ ಜೊತೆಗೆ ಗುಣಮಟ್ಟಕ್ಕೂ ಆದ್ಯತೆ ನೀಡಬೇಕಾಗುತ್ತದೆ. ಈ ಕುರಿತು ಜಿಲ್ಲಾಧಿಕಾರಿ ನೇತೃತ್ವದಲ್ಲಿ ರೈಲ್ವೆ ಅಧಿಕಾರಿಗಳ ಸಭೆ ನಡೆಸಿ ಕೆಲಸ ಮುಗಿಸುವಂತೆ ಸೂಚಿಸಲಾಗುವುದು ಎಂದು ಹಾಸನ ಶಾಸಕ ಪ್ರೀತಂ ಜೆ. ಗೌಡ ತಿಳಿಸಿದ್ದಾರೆ.
ಮೇಲ್ಸೇತುವೆ ಕಾಮಗಾರಿಯಿಂದಾಗಿ ಸದ್ಯ ನಗರದ ಜನ ನರಕ ಯಾತನೆ ಅನುಭವಿಸುವಂತಾಗಿದೆ. ಹೊಸ ಬಸ್ ನಿಲ್ದಾಣ, ಕೈಗಾರಿಕಾ ಪ್ರದೇಶ, ಹೊಳೆನರಸೀಪುರ ಮತ್ತು ವೆುಸೂರಿಗೆ ಹೋಗುವವರು ತೊಂದರೆ ಅನುಭವಿಸುತ್ತಿದ್ದಾರೆ. ಚನ್ನಪಟ್ಟಣ ಹೌಸಿಂಗ್ ಬೋರ್ಡ್ ನಿವಾಸಿಗಳು ನಗರಕ್ಕೆ ಬರಲು ಕದಂಬ, ಸುವರ್ಣ ರೆಸಿಡೆನ್ಸಿ ಮಾರ್ಗದಲ್ಲಿ ಬಂದು ಎನ್‌ಆರ್ ವೃತ್ತ ತಲುಪಬೇಕಿದೆ. ಮೇಲ್ಸೆತುವೆ ಕಾಮಗಾರಿ ನಡೆಯುತ್ತಿರುವಾಗ ರಸ್ತೆ ಬಂದ್ ಮಾಡಿದ್ದರೆ ಒಪ್ಪಬಹುದಿತ್ತು. ಆದರೆ ಕಾರ್ಮಿಕರು ಮಾತ್ರ ಕಬ್ಬಿಣ ಕುಟ್ಟುತ್ತಾ ಕೂರುವ ಕೆಲಸಕ್ಕೆ ರಸ್ತೆ ಬಂದ್ ಮಾಡುವುದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಎನ್‌ಆರ್ ವೃತ್ತದಿಂದ ಸ್ವಲ್ಪ ದೂರದಲ್ಲಿರುವ ಬಸ್ ನಿಲ್ದಾಣ ತಲುಪಲು ಮೂರು ಕಿ.ಮೀ. ಸುತ್ತು ಹೊಡೆಯುವುದನ್ನು ತಪ್ಪಿಸಲು, ಬೈಕ್ ಹಾಗೂ ಆಟೋ ಚಾಲಕರು ಮಣ್ಣು ರಾಶಿಯ ಮೇಲೆ ವಾಹನ ಚಾಲನೆಯ ಸಾಹಸಕ್ಕೆ ಮುಂದಾಗುತ್ತಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ರಸ್ತೆಯಲ್ಲಿ ಬರುವ ಪಾದಚಾರಿಗಳು ಸಾಕಷ್ಟು ಸಾರಿ ಬಿದ್ದು ಏಟು ಮಾಡಿಕೊಂಡಿದ್ದಾರೆ. ಕೆಲಸ ನಿಧಾನಗತಿಯಲ್ಲಿ ನಡೆಯುವುದಾದರೆ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.