ಹಾಸನ: ನಮ್ಮ ಭಾಗದ ಜನಕ್ಕೆ ಮೊದಲು ನೀರು ಕೊಡಿ. ಇಲ್ಲವಾದರೆ ನಾವು ಮತದಾನ ಬಹಿಷ್ಕರಿಸುತ್ತೇವೆ ಎಂದು ಚನ್ನರಾಯಪಟ್ಟಣದ ಜನ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿಯೇ ಜನಪ್ರತಿನಿಧಿಗಳಿಗೆ ಎಚ್ಚರಿಕೆ ರವಾನಿಸಿದ್ದಾರೆ.
ಲೋಕಸಭೆ ಚುನಾವಣೆ ಹಿನ್ನೆಲೆ ಮತದಾನ ಬಹಿಷ್ಕರಿಸುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿರುವ ಮತದಾರರು, ಹಾಲಿ ಸರ್ಕಾರಕ್ಕೂ ಎಚ್ಚರಿಕೆ ನೀಡಿದ್ದಾರೆ. ಹೊಳೆನರಸೀಪುರ ವಿಧಾನಸಭಾ ಕ್ಷೇತ್ರಕ್ಕೆ ಸೇರಿರುವ ದಂಡಿಗನಹಳ್ಳಿ ಹೋಬಳಿಯಲ್ಲಿ ಕಾಚೇನಹಳ್ಳಿ ಏತ ನೀರಾವರಿ ಯೋಜನೆಯನ್ನ ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ಆದರೆ ಮೂರು ದಶಕ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಆರೋಪಿಸಿದ್ದಾರೆ.
ಆಲಗೊಂಡನಹಳ್ಳಿ ಹಾಗೂ ನಾರಾಯಣಪುರ ಏತನೀರಾವರಿ ಕಾಮಗಾರಿ ಮುಕ್ತಾಯವಾಗಿದ್ದರೂ ಕ್ಷೇತ್ರದ ಶಾಸಕರು, ಸಂಸದರು ಉದ್ಘಾಟಿಸುವ ಗೋಜಿಗೆ ಹೋಗಿಲ್ಲವೆಂದು ದೂರಿದ್ದಾರೆ. ಶ್ರವಣಬೆಳಗೊಳದ ನುಗ್ಗೇಹಳ್ಳಿ ಹಾಗೂ ಹಿರೀಸಾವೆಯಲ್ಲಿ ನೀರಿನ ಸಮಸ್ಯೆಯಿದೆ. ಏತ ನೀರಾವರಿ ಕಾಮಗಾರಿ ದಶಕಗಳಿಂದ ನಡೆಯುತ್ತಲೇ ಇದೆ ಎಂದು ಅಧಿಕಾರಿಗಳ ವಿರುದ್ಧ ಜನ ಕಿಡಿಕಾರಿದ್ದಾರೆ.
ಸುಮಾರು 57 ಕೋಟಿ ರೂ. ವೆಚ್ಚದಲ್ಲಿ ಜನಿವಾರ ಕೆರೆಯಿಂದ ಹಿರೀಸಾವೆ-ಜುಟ್ಟನಹಳ್ಳಿ ಭಾಗದ 26 ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆ ಕಾಮಗಾರಿ ಸಹ ಮುಗಿಯುವ ಲಕ್ಷಣ ಕಾಣತ್ತಿಲ್ಲ. ಬಾಗೂರು ಸಮೀಪ ಹರಿಯುತ್ತಿರುವ ಹೇಮಾವತಿ ನಾಲೆಯಿಂದ ನುಗ್ಗೇಹಳ್ಳಿ ಹೋಬಳಿ 11 ಕೆರೆಗಳಿಗೆ ಪೈಪ್ ಮೂಲಕ ನೀರು ತುಂಬಿಸುವ 17.67 ಕೋಟಿ ರೂ. ವೆಚ್ಚದ ಏತನೀರಾವರಿ ಯೋಜನೆ ನೆನಗುದಿಗೆ ಬಿದ್ದಿದೆ. ಅಂತರ್ಜಲ ಕುಸಿದಿರುವ ಕಾರಣ ತೆಂಗಿನ ತೋಟಗಳು ನಾಶವಾಗುತ್ತಿವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಯುವಕರು ಪೋಸ್ಟ್ ಹಾಕಿದ್ದಾರೆ.
ನೀರಿನ ಸಮಸ್ಯೆ ಇನ್ನೂ ಜೀವಂತವಾಗಿರುವಾಗ ಈ ಭಾಗದ ಜನರಿಗೆ ಚುನಾವಣೆ ಬಹಿಷ್ಕಾರವೊಂದೇ ದಾರಿಯೆಂದು
ಸ್ಥಳೀಯರು ಮತದಾನ ಬಹಿಷ್ಕಾರಕ್ಕೆ ಕರೆ ಕೊಟ್ಟಿದ್ದಾರೆ.
ತಮ್ಮ ಸಮಸ್ಯೆಗಳನ್ನು ಆಧುನಿಕವಾಗಿ ಹರಡಲು ನುಗ್ಗೇಹಳ್ಳಿ ಏತನೀರಾವರಿ ಹೋರಾಟ ಸಮಿತಿ ಎಂಬ ಫೇಸ್‌ಬುಕ್ ಪೇಜ್ ತೆರೆದಿರುವ ಗ್ರಾಮಸ್ಥರು ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ. ನುಗ್ಗೇಹಳ್ಳಿ ಹೋಬಳಿ ಜನರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿದೆ. ಕಾಮಗಾರಿ ಕುಂಠಿತವಾಗಲು ಕಾರಣವೇನು ಎನ್ನುವ ಸಮಗ್ರ ಮಾಹಿತಿಯನ್ನೂ ಪೋಸ್ಟ್ ಮಾಡಿದ್ದಾರೆ.
ಹಿರೀಸಾವೆ ಹೋಬಳಿ ದಿಡಗ ಹಾಗೂ ಕಬ್ಬಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅನೇಕ ಗ್ರಾಮಗಳಲ್ಲಿಯೂ ಏತನೀವಾರಿ ಯೋಜನೆ ಕಾಮಗಾರಿ ಕುಂಠಿತವಾಗಿರುವ ಬಗ್ಗೆ ಕರಪತ್ರಗನ್ನು ಹಂಚುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿಯೂ ಕರಪತ್ರಗಳನ್ನು ಪೋಸ್ಟ್ ಮಾಡಿ ಅಳಲು ತೋಡಿಕೊಳ್ಳುತ್ತಿದ್ದಾರೆ.
ಇಷ್ಟೊಂದು ಸಮಸ್ಯೆಗಳಿದ್ದರೂ ಬಗೆಹರಿಸದ ಜನಪ್ರತಿನಿಧಿಗಳಿಗೆ ತಕ್ಕೆ ಪಾಠ ಕಲಿಸಲು ಈ ಬಾರಿ ಚುನಾವಣೆ ಬಹಿಷ್ಕರಿಸುವ ಮೂಲಕ ಬೃಹತ್ ಆಂದೋಲನಕ್ಕೆ ಸಿದ್ದತೆ ಮಾಡುತ್ತಿದ್ದಾರೆ. 1999 ಬಾಗೂರು ನವಿಲೆ ಸುರಂಗ ಸಂತ್ರಸ್ತರು ಸೂಕ್ತ ಪರಿಹಾರ ನೀಡಬೇಕೆಂದು ಪಟ್ಟುಹಿಡಿದು ವಡ್ಡರಹಳ್ಳಿ ಜಾಕ್ವೆಲ್ ಬಳಿ ಅಹೋರಾತ್ರಿ ಧರಣಿ ಮಾಡುತ್ತಿದ್ದ ವೇಳೆ ಅಂದಿನ ಜಿಲ್ಲಾ ಉಸ್ತುವಾರಿ ಮತ್ತು ವಸತಿ ಸಚಿವರಾಗಿದ್ದ ಹೆಚ್.ಡಿ. ರೇವಣ್ಣ ಲಾಠಿ ಚಾರ್ಚ್ ಮಾಡಿಸಿದ್ದನ್ನು ತಾವು ಮರೆತಿಲ್ಲ ಎಂದೂ ಇಲ್ಲಿನ ಹೇಳ್ತಿದ್ದಾರೆ.