ಹಾಸನ: ಸ್ವಾಮಿ ಎತ್ಕೊಂಡು ಹೋಗ್ಬೇಡಿ, ಮದುವೆ ಸೀಜನ್, ಒಂದೆರಡು ಗಂಟೆ ವ್ಯಾಪಾರ ಮಾಡ್ಕತೀವಿ, ರಾತ್ರಿಯೆಲ್ಲ ಕಷ್ಟಪಟ್ಟಿದ್ದೇವೆ ಸ್ವಾಮಿ ಅಂತ ಅಂಗಲಾಚಿದರೂ ಕರುಣೆ ಇಲ್ಲದ ನಗರಸಭೆ ಅಧಿಕಾರಿಗಳು ಇವತ್ತು ಬುಟ್ಟಿ ಮಾರುವವರ ಬದುಕನ್ನೇ ಮೂರಾಬಟ್ಟೆ ಮಾಡಿದ್ದಾರೆ.
ಇಂದು ಬೆಳಗ್ಗೆ ನಗರದ ಸಂತೇಪೇಟೆ, ಕೃಷಿ ಇಲಾಖೆ ಮತ್ತು ನಗರಸಭೆ ಮುಂಭಾಗ ಬಿದಿರಿನ ಬುಟ್ಟಿಗಳನ್ನು ಮಾರುತ್ತಿದ್ದ ವ್ಯಾಪಾರಸ್ಥರನ್ನು ಮಾರಾಟ ಮಾಡದಂತೆ ನಗರಸಭೆ ಅಧಿಕಾರಿಗಳು ತಡೆದಿದ್ದಾರೆ. ಜೊತೆಗೆ ಮಾರಾಟ ಮಾಡಲು ತಂದಿದ್ದ ಬುಟ್ಟಿಗಳನ್ನು ಕಸಿದುಕೊಂಡು ಹೋಗಿರುವುದು ವ್ಯಾಪಾರಸ್ಥರಿಗೆ ತುಂಬಾ ನೋವುಂಟು ಮಾಡಿದೆ.
ಈಗ ಸಾಮಾನ್ಯವಾಗಿ ಮದುವೆ ಸೀಸನ್. ಅಲ್ಲದೇ, ಬಿದರಿನ ಬುಟ್ಟಿಗಳನ್ನು ಕೊಳ್ಳುವವರೇ ಕಡಿಮೆ, ಆದರೆ ಗ್ರಾಮೀಣ ಭಾಗದ ಜನರು ಮದುವೆ ಕಾರ್ಯಕ್ರಮ ಮತ್ತು ಶುಭ ಸಮಾರಂಭಗಳಿಗೆ ಬಿದಿರಿನಿಂದ ಮಾಡಿದ ಬುಟ್ಟಿಗಳನ್ನು ಕೊಳ್ಳುವುದೂ ವಾಡಿಕೆ.
ರಾತ್ರಿ ಹಗಲು ಎನ್ನದೇ ಬುಟ್ಟಿಯನ್ನ ಇರುತ್ತೇವೆ. ಅದರಿಂದ ಬಂದ ಹಣವೇ ನಮ್ಮ ಜೀವನೋಪಾಯ ನಡೆಸುತ್ತೇವೆ. ಕನಿಷ್ಠ 2 ಗಂಟೆ ಸಮಯ ಅವಕಾಶಕೊಟ್ಟರೆ ನಾವು ಒಂದು ಊಟ ಮಾಡುತ್ತೇವೆ. ಆದ್ರೆ ನಗರಸಭೆಯವರು ಎಷ್ಟು ಹೇಳಿದರೂ ಕೇಳದೇ ನಮ್ಮ ವಸ್ತುಗಳನ್ನು ತಾವು ತಂದಿದ್ದ ಗಾಡಿಗಳಿಗೆ ಹಾಕಿಕೊಂಡು ಹೋಗಿದ್ದಾರೆ ಎಂದು ವ್ಯಾಪಾರಸ್ಥರು ಅಳಲು ತೋಡಿಕೊಂಡರು.
ಸರ್ಕಾರ ತಟ್ಟೆಗೆ ಊಟ ಹಾಕಿ ಬಾಯಿ ಬೀಗ ಹಾಕಿದೆ
ಮದುವೆ ಮಾಡಲು ಅವಕಾಶ ಕೊಟ್ಟ ಸರ್ಕಾರ ಮದುವೆಗೆ ಬೇಕಾದ ವಸ್ತುಗಳನ್ನು ಮಾರಾಟ ಮಾಡಲು ಅವಕಾಶ ನೀಡಿಲ್ಲ. ತಟ್ಟೆಗೆ ಊಟ ಹಾಕಿ ಬಾಯಿಗೆ ಬೀಗ ಹಾಕಿದಂತೆ ಸರ್ಕಾರ ಮಾಡಿರುವುದು ಖಂಡನೀಯ. ದಯಮಾಡಿ ನಮಗೆ ಬೆಳಗ್ಗೆ 9 ಗಂಟೆಯ ತನಕವಾದರೂ ವ್ಯಾಪಾರ ಮಾಡಲು ಅವಕಾಶ ಕೊಡಿ. ನಾವು ಕೂಡ ಸಾಮಾಜಿಕ ಅಂತರ ಕಾಪಾಡಿಕೊಂಡು, ಸ್ಯಾನಿಟೈಸರ್ ಹಾಕಿಕೊಂಡು ಜೊತೆಗೆ ಪ್ರತಿಯೊಬ್ಬರು ಹಾಕಿ ವ್ಯಾಪಾರ ಮಾಡುತ್ತೇವೆ ಎಂದು ವ್ಯಾಪಾರಿಗಳು ಮನವಿ ಮಾಡಿದರು.
ಒಟ್ಟಾರೆಯಾಗಿ ನಿನ್ನೆಯಿಂದ ರಾಜ್ಯಾದ್ಯಂತ ಕಠಿಣ ಲಾಕ್ಡೌನ್ ಶುರುವಾಗಿದೆ. ಬೆಳಗ್ಗೆ 6ರಿಂದ 10 ಗಂಟೆಯ ತನಕ ಅಗತ್ಯ ಇರುವಂತಹ ಅಂಗಡಿ - ಮುಂಗಟ್ಟುಗಳನ್ನು ತೆರೆದು ವ್ಯಾಪಾರ ಮಾಡಲು ಸರ್ಕಾರ ಅನುಮತಿಸಿದೆ. ಆದರೆ, ಬುಟ್ಟಿ ಹೆಣೆಯುವವರಿಗೆ ಮಾತ್ರ ಅವಕಾಶ ಕೊಡದಿರುವುದು ಅವರ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಇಟ್ಟಂತಾಗಿದೆ. ಸರ್ಕಾರ ಕನಿಷ್ಠ ಬೆಳಗ್ಗೆ 7 ರಿಂದ 9 ಗಂಟೆ ವರೆಗೆ ಮಾರಾಟಕ್ಕೆ ಅವಕಾಶಕೊಟ್ಟರೆ ಒಪ್ಪತ್ತು ಊಟಕ್ಕಾದರೂ ಸಾಕಾಗುತ್ತೇ.