ಹಾಸನ: ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರು ಬೆಳೆದ ತರಕಾರಿಯನ್ನು ವ್ಯಾಪಾರ ಮಾಡಲು ಪೊಲೀಸರು ಅವಕಾಶ ನೀಡುತ್ತಿಲ್ಲ ಎಂದು ವರ್ತಕರು ಜಿಲ್ಲಾಧಿಕಾರಿ ಬಳಿ ಅಳಲು ತೋಡಿಕೊಂಡಿದ್ದಾರೆ. ನಮ್ಮಲ್ಲಿ ಎಷ್ಟೋ ಮಂದಿಗೆ ಪಾಸ್ ನೀಡಿಲ್ಲ. ಇದರಿಂದ ಎಪಿಎಂಸಿ ಮಾರುಕಟ್ಟೆ ಒಳಗೆ ಪ್ರವೇಶ ಮಾಡುವುದೇ ಕಷ್ಟವಾಗಿದೆ. ಕೂಡಲೇ ನಮ್ಮ ಸಮಸ್ಯೆ ಬಗೆಹರಿಸುವಂತೆ ವರ್ತಕರು ಜಿಲ್ಲಾಧಿಕಾರಿ ಬಳಿ ಮನವಿ ಮಾಡಿದ್ದಾರೆ.
ವಾರದಲ್ಲಿ 4 ದಿನಗಳ ಕಾಲ ಬೆಳಗ್ಗೆ 7 ರಿಂದ ಮಧ್ಯಾಹ್ನ 12 ಗಂಟೆಯವರೆಗೂ ತರಕಾರಿ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಪೊಲೀಸರು ಬೆಳಗ್ಗೆ 10.30 ಕ್ಕೆ ಬಂದು ನಮಗೆ ಜಾಗ ಖಾಲಿ ಮಾಡುವಂತೆ ಬೆದರಿಸುತ್ತಿದ್ಧಾರೆ. ವ್ಯಾಪಾರಸ್ಥರು ಬರದಿದ್ದರೆ ರೈತ ನಷ್ಟ ಅನುಭವಿಸಿ ಸಾಯಬೇಕಾದ ಪರಿಸ್ಥಿತಿ ಉಂಟಾಗುತ್ತದೆ ಎಂದು ವರ್ತಕರು ದು:ಖ ತೋಡಿಕೊಂಡರು. ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಮಾತನಾಡಿ, ನಾವು ರಿಟೇಲ್ ಮಾರಾಟ ಮಾಡುವ ಯಾರನ್ನೂ ಮುಖ್ಯ ದ್ವಾರದ ಬಳಿ ತಡೆದಿಲ್ಲ. ದ್ವಿಚಕ್ರ ವಾಹನದಲ್ಲಿ ಬರುವವರನ್ನು ತಡೆದು ಅಗತ್ಯವಾದ ಗುರುತಿನ ಚೀಟಿ ನೋಡಿ ಒಳಗೆ ಬಿಡುತ್ತಿದ್ದೇವೆ, ಗೂಡ್ಸ್ ವಾಹನದಲ್ಲಿ ಬರುವವರನ್ನು ನಾವು ತಡೆಯದೆ ನೇರವಾಗಿ ಮಾರುಕಟ್ಟೆ ಒಳಗೆ ಬಿಡುತ್ತಿದ್ದೇವೆ. ಆದಷ್ಟು ಬೇಗ ಕ್ಯೂ ಕಾರ್ಡ್ ನೀಡುತ್ತೇವೆ. ಇದನ್ನು ನಿಮ್ಮ ನಿಮ್ಮ ವಾಹನಗಳ ಮೇಲೆ ಅಂಟಿಸಿಕೊಳ್ಳಿ. ನಮ್ಮ ಸಿಬ್ಬಂದಿ ಸ್ಟಿಕ್ಕರನ್ನು ಸ್ನ್ಯಾನ್ ಮಾಡಿ ಒಳಗೆ ಬಿಡುತ್ತಾರೆ ಎಂದು ಸಲಹೆ ನೀಡಿದರು.
ಇದೇ ಸಭೆಯಲ್ಲಿ ಹಾಜರಿದ್ದ ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, ಕೊರೊನಾ ವೈರಸ್ ಬಗ್ಗೆ ಪ್ರತಿಯೊಬ್ಬರಲ್ಲೂ ಆತಂಕವಿದೆ. ತಮ್ಮ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ಪ್ರತಿಯೊಬ್ಬರೂ ಜಾಗರೂಕರಾಗಿರಬೇಕು. ಆದರೆ ಜಿಲ್ಲೆಯಲ್ಲಿ ಜನರು ಸುಮ್ಮನೆ ಹೊರಗಡೆ ಸುತ್ತಾಡುತ್ತಿದ್ಧಾರೆ ಎಂದು ಬೇಸರ ವ್ಯಕ್ತಪಡಿಸಿದರು. ಇನ್ನು ಹೊಳೆನರಸೀಪುರದಲ್ಲಿ ವಾರದಲ್ಲಿ ಎರಡು ದಿನ ಮಾರುಕಟ್ಟೆ ತೆರೆದು ವ್ಯಾಪಾರ ಮಾಡುವಂತೆ ಸೂಚಿಸಿದ್ದೇವೆ ಎಂದು ಪ್ರಜ್ವಲ್ ರೇವಣ್ಣ ಹೇಳಿದರು.