ಅರಕಲಗೂಡು: ಇಂದು ದೇಶದ ರಕ್ಷಣೆಗಾಗಿ ಹುತಾತ್ಮರಾದ ವೀರ ಯೋಧರನ್ನು ಸ್ಮರಿಸುವ, ನಮಿಸುವ ದಿನ. ಕಾರ್ಗಿಲ್ ಯುದ್ಧದಲ್ಲಿ ಅರಕಲಗೂಡು ತಾಲೂಕಿನ ಅಗ್ರಹಾರದ ಯೋಧರೊಬ್ಬರು ವೀರಮರಣ ಹೊಂದಿದ್ದರು. ಈ ಯೋಧನ ಕುರಿತಾದ ಮಾಹಿತಿ ಇಲ್ಲಿದೆ.
ಕಾರ್ಗಿಲ್ ಯುದ್ಧದ ಆರಂಭದಲ್ಲಿ ಮೃತ ಪಟ್ಟ ಪ್ರಮುಖರಲ್ಲಿ ಅರಕಲಗೂಡು ತಾಲೂಕಿನ ಅಗ್ರಹಾರದ ವೆಂಕಟ (ರಾಜೇಂದ್ರ) ಒಬ್ಬರು. ಕಾರ್ಗಿಲ್ ಯುದ್ಧದಲ್ಲಿ ಮಡಿದ ಹಾಸನ ಜಿಲ್ಲೆಯ ಮೊದಲ ಯೋಧರು ಹೌದು. ಅಂದು ವೆಂಕಟ ಸಾವಿಗೆ ಇಡೀ ನಾಡಿನ ಜನತೆ ಕಣ್ಣೀರು ಹಾಕಿದ್ದರು. ಹಾಸನದಿಂದ ಅಗ್ರಹಾರದವರೆಗೆ ನಡೆದ ಪಾರ್ಥಿವ ಶರೀರದ ಯಾತ್ರೆಯಲ್ಲಿ ರಾಜ್ಯದ ವಿವಿಧೆಡೆಯಿಂದ ಆಗಮಿಸಿ ಸಾವಿರಾರು ಜನ ಗೌರವ ಸಲ್ಲಿಸಿದ್ದರು. ಅಂದಿನ ಶಾಸಕರಾಗಿದ್ದ ಎ.ಟಿ ರಾಮಸ್ವಾಮಿಯವರ ನೇತೃತ್ವದಲ್ಲಿ ಹುತಾತ್ಮ ಯೋಧನ ಪಾರ್ಥಿವ ಶರೀರ ಸಾಗಿ ಬಂದಾಗ ಪ್ರತೀ ಹಳ್ಳಿಯಲ್ಲೂ ಗೌರವ ಅರ್ಪಿಸಿದ್ದರು.
ವೆಂಕಟ್ ಅವರ ಕಲ್ಲಿನ ಪ್ರತಿಮೆಯನ್ನು ಕುಟುಂಬದವರು ಅಗ್ರಹಾರ ಗ್ರಾಮದ ಅವರ ಜಮೀನಿನಲ್ಲಿ ಸ್ಥಾಪಿಸಿದ್ದಾರೆ. ದೇಶ ಪ್ರೇಮ, ಧೈರ್ಯ ಸಾಹಸಕ್ಕೆ ಸ್ಫೂರ್ತಿಯಾದ ಕಾರ್ಗಿಲ್ ಹುತಾತ್ಮ ಯೋಧನನ್ನು ಹಾಸನದ ಜನ ಸ್ಮರಿಸುತ್ತಿದ್ದಾರೆ.
26ನೇ ಜುಲೈ 1999 ರ ಘಟನೆಯ ಚಿತ್ರಣ:
ಕೊರೆಯುವ ಚಳಿ, ಮಂಜಿನ ಹೊದಿಕೆಯ ವಾತಾವರಣ. ಬಂಕರ್ನಲ್ಲಿ ಕುಳಿತು ಗಡಿಯತ್ತ ಕಣ್ಗಾವಲಿರಿಸಿದ್ದ ಭಾರತೀಯ ಯೋಧರಿಗೆ ಅನಿರೀಕ್ಷಿತ ದಾಳಿ ಎದುರಾಗಿತ್ತು. ಅಂದು ಪಾಕ್ ಉಗ್ರರು ಮತ್ತು ಪಾಕ್ ಸೇನೆಯ ಮೋಸದ ದಾಳಿಗೆ ಭಾರತೀಯ ಯೋಧರು ಹುತಾತ್ಮರಾದರು. ತಕ್ಷಣ ಗಡಿ ಭದ್ರತಾ ಪಡೆಯ ಯೋಧರು ಪ್ರತಿ ದಾಳಿ ನಡೆಸಿ, ಶತ್ರುಗಳನ್ನು ಹಿಮ್ಮೆಟ್ಟಿಸಿದರು.
ಜುಲೈ 26 ರಂದು ಪಾಕ್ ಸೈನಿಕರನ್ನು ಹುಟ್ಟಡಗಿಸಿದ ಭಾರತೀಯ ಯೋಧರು ವಿಜಯದ ಪತಾಕೆ ಹಾರಿಸಿದರು. ಆ ಮೂಲಕ ಶತ್ರುಗಳ ಕುತಂತ್ರದ ದಾಳಿಗೆ ಬಲಿಯಾದ, ಗಾಯಗೊಂಡ ಭಾರತೀಯ ಯೋಧರಿಗೆ ಗೌರವ ಸಲ್ಲಿಸಿದರು. ಸೇನೆಯ ಸಾಮರ್ಥ್ಯ ನೆನೆದು ದೇಶದ ಜನತೆಗೆ ಹೆಮ್ಮೆ ಮೂಡುವಂತೆ ಮಾಡಿದರು. ಆ ದಿನವೇ ಕಾರ್ಗಿಲ್ ವಿಜಯ ದಿವಸ್.