ಹಾಸನ : 10 ವರ್ಷಗಳ ಬಳಿ ದಂಪತಿಗೆ ಮಗುವಾಗಿದೆ. ಆದರೆ, ಮಗುವನ್ನ ನೋಡುವ ಭಾಗ್ಯವೇ ದಂಪತಿಗೆ ಇಲ್ಲವಾಗಿದೆ. ತಾಯಿ ಸಾವು ಬದುಕಿನ ಮಧ್ಯ ನರಳುತ್ತಿದ್ದರೇ, ಕೋವಿಡ್ ಸೋಂಕಿಗೆ ಒಳಗಾಗಿ ತಂದೆಯೂ ಮರುಕ ಪಡುತ್ತಿದ್ದಾರೆ.
ಮೂಲತಃ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ದೇವರಮನೆ ಸಮೀಪದ ಬೈದುವಳ್ಳಿಯವರಾದ ರಮ್ಯ ಎಂಬುವರನ್ನು, ಕಳೆದ 10 ವರ್ಷದ ಹಿಂದೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಜಮ್ಮನಹಳ್ಳಿಯ ಲೋಹಿತ್ ಎಂಬುವರು ಮದುವೆಯಾಗಿದ್ದರು.
ಮದುವೆಯಾಗಿ 10 ವರ್ಷವಾದ್ರೂ ದಂಪತಿಗೆ ಮಕ್ಕಳಾಗಿರಲಿಲ್ಲ. ಬಳಿಕ ಕಳೆದ ವರ್ಷ ಲಾಕ್‌ಡೌನ್ ವೇಳೆ ರಮ್ಯರಿಗೆ ತಾಯ್ತನದ ಸೂಚನೆ ನೀಡಿದಾಗ, ಇಡೀ ಕುಟುಂಬವೇ ಸಂತೋಷಪಟ್ಟಿತ್ತು.
ಮನೆಗೆ ಮಗುವೊಂದು ಬರುವ ಹಿನ್ನೆಲೆ ದಂಪತಿಯ ಖುಷಿಗೆ ಪಾರವೇ ಇರಲಿಲ್ಲ. ಆದ್ರೆ, ಕೊರೊನಾ ಈ ದಂಪತಿಯ ಖುಷಿಗೆ ಬ್ರೇಕ್ ಹಾಕಿದೆ.
ಮೊದಲ ತಾಯ್ತನವನ್ನು ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿಯೇ ಮಾಡಿಸಲು ಮುಂದಾದ ದಂಪತಿಗೆ, ಕೋವಿಡ್ ಸೋಂಕು ತಗುಲಿದ ವಿಷಯ ತಿಳಿದ ಕೂಡಲೇ, ಆಕಾಶವೇ ತಲೆಯ ಮೇಲೆ ಬಿದ್ದ ಹಾಗಿತ್ತು.
ಆದ್ರೆ, ವೈದರು ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದಾರೆ. ದಂಪತಿಯಷ್ಟೆಯಲ್ಲದೇ, ಇಡೀ ಕುಟುಂಬವೇ ವೈದ್ಯರಿಗೆ ಚಿರಋಣಿಯಾಗಿದೆ. ಕೊವೀಡ್ ಸೋಂಕಿತೆಯು 10 ವರ್ಷದ ಬಳಿಕ ಅವಳಿ ಮಗುವಿಗೆ ಜನ್ಮ ನೀಡಿದ್ದಾಳೆ.
ಆದ್ರೆ, ಆಕೆ ಸೋಂಕಿತೆಯಾಗಿದ್ದು, ಶೇ.70ಷ್ಟು ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿರುವುದರಿಂದ ಹೆತ್ತ ಮಗುವನ್ನು ನೋಡಲು ಸಾಧ್ಯವಾಗದೇ ತನಗರಿವಿಲ್ಲದಂತೆ, ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಂದೆ ಲೋಹಿತ್ ಕೂಡ ಕೋವಿಡ್ ಸೋಂಕಿಗೊಳಗಾಗಿ ಮತ್ತೊಂದು ಕೊಠಡಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜನ್ಮ ಪಡೆದ ಮಕ್ಕಳು ಕೂಡ ತಾಯಿಯ ಎದೆಯಾಲಿನಿಂದ ವಂಚಿತರಾಗಿ ಐಸಿಯುನಲ್ಲಿ ಲೋಕದರಿವಿಲ್ಲದೇ ಮಲಗಿವೆ.
ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ 400ಕ್ಕೂ ಹೆಚ್ಚು ಕೊರೊನಾ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದ್ರ ಮದ್ಯೆ ರಮ್ಯಾ ಚಿಕಿತ್ಸೆ ಪಡೆಯುತ್ತಿದ್ದು, ಗರ್ಭದಲ್ಲಿರುವ ಮಕ್ಕಳಿಗೂ ಸೋಂಕು ತಗುಲುವ ಸಾಧ್ಯತೆ ಜತೆಗೆ ತಾಯಿ-ಮಕ್ಕಳು ಬದುಕಿ ಉಳಿಯುವುದು ಕಷ್ಟವಾಗಿತ್ತು.
ಹಗಲಿರುಳೆನ್ನದೆ ದುಡಿಯುತ್ತಿರುವ ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿ ರಮ್ಯಾಳ ಬಗ್ಗೆ ಹೆಚ್ಚು ನಿಗಾವಹಿಸಿ ಸಿಸೇರಿಯನ್ ಮೂಲಕ ಅವಳಿ ಮಕ್ಕಳನ್ನು ಹೊರತೆಗೆದಿದ್ದಾರೆ. ಸದ್ಯ ಅವಳಿ ಮಕ್ಕಳು ಆರೋಗ್ಯವಾಗಿವೆ.
ಮಕ್ಕಳಿಗೆ ಜನ್ಮ ನೀಡಿದ ಕೊರೊನಾ ಸೋಂಕಿತ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಹೆತ್ತವರನ್ನು ನೋಡಲು ಮಕ್ಕಳಿಗೆ ಭಾಗ್ಯವಿಲ್ಲ. ತಾಯಿಯ ಎದೆ ಹಾಲನ್ನು ನೀಡಲು ಹೆತ್ತಮ್ಮನಿಗೆ ಸಾಧ್ಯವಿಲ್ಲ.
ಇಂತಹ ಪರಿಸ್ಥಿತಿಯಲ್ಲಿಯೂ ರಮ್ಯಾಳ ಪತಿ ಲೋಹಿತ್ ಹಿಮ್ಸ್ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಕೆಲವರು ವೈದ್ಯರನ್ನು ಮತ್ತು ಸಿಬ್ಬಂದಿಯನ್ನು ಕೆಟ್ಟವರಂತೆ ಬಿಂಬಿಸುತ್ತಾರೆ. ಆದ್ರೆ, ಅವರು ತಮ್ಮ ಕುಟುಂಬ ಮರೆತು ನಮ್ಮ ಕುಟುಂಬಕ್ಕಾಗಿ ದುಡಿಯುತ್ತಿದ್ದಾರೆ.
ಈಗಲೂ ನನ್ನ ಪತ್ನಿ ಕೋವಿಡ್‌ನಿಂದ ಸಂಪೂರ್ಣ ಗುಣಮುಖರಾಗಿಲ್ಲ. ಯಾರೂ ವೈದ್ಯರನ್ನು ದೂಷಿಸಬೇಡಿ. ದೇವರ ರೀತಿ ನಮಗೆ ಸಹಾಯ ಮಾಡಿದ ಹಾಸನ ವೈದ್ಯರು, ವೈದ್ಯಕೀಯ ಸಿಬ್ಬಂದಿಗೆ ಧನ್ಯವಾದ ಎಂದಿದ್ದಾರೆ.