ಹಾಸನ (ಹೊಳೆನರಸೀಪುರ): ನಾನು ಒಬ್ಬ ಪೊಲೀಸ್ ನಿಮ್ಮನ್ನು ವಿಚಾರಣೆ ಮಾಡಬೇಕು ನಮ್ಮ ಜೊತೆ ಠಾಣೆಗೆ ಬನ್ನಿ ಎಂದು ಕರೆದೊಯ್ದು ವ್ಯಕ್ತಿಯೋರ್ವನ ಬಳಿಯಿದ್ದ ಬೈಕ್ ಮತ್ತು ಚಿನ್ನಾಭರಣಗಳನ್ನು ದೋಚಿದ ನಕಲಿ ಪೊಲೀಸ್ ಒಬ್ಬನನ್ನು ಕೇವಲ 24 ಗಂಟೆಗಳಲ್ಲಿ ಜಿಲ್ಲೆಯ ಹೊಳೆನರಸೀಪುರ ಪೊಲೀಸರು ಬಂಧಿಸಿದ್ದಾರೆ.
ಶಿವು ಅಲಿಯಾಸ್ ಮಾರಗೊಂಡನಹಳ್ಳಿ ಶಿವ (37) ಬಂಧಿತ ಆರೋಪಿಯಾಗಿದ್ದು, ಆತನಿಂದ 1 ಲಕ್ಷದ 73 ಸಾವಿರ ರೂ. ಮೌಲ್ಯದ ಚಿನ್ನಾಭರಣ ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣದ ಹಿನ್ನೆಲೆ: ಸೆ. 24ರಂದು ಕುಮಾರ್ ಎಂಬುವರು ತಮ್ಮ ದ್ವಿಚಕ್ರ ವಾಹನದಲ್ಲಿ ಕೃಷಿಗೆ ಬೇಕಾದ ಬಿತ್ತನೆ ಬೀಜವನ್ನು ತರಲು ಹೊಳೆನರಸೀಪುರ ಪಟ್ಟಣಕ್ಕೆ ಹೋಗಿದ್ದರು. ತಮಗೆ ಬೇಕಾದ ಬಿತ್ತನೆ ಬೀಜ ಸಿಗದ ಹಿನ್ನೆಲೆಯಲ್ಲಿ ಸ್ವಗ್ರಾಮಕ್ಕೆ ವಾಪಸ್ ತೆರಳುವ ಮಾರ್ಗಮಧ್ಯೆ ಹಾಸನ-ಮೈಸೂರು ರಸ್ತೆಯಲ್ಲಿರುವ ರೇಣುಕಾ ಕಂಫರ್ಟ್ ಕಾಂಪ್ಲೆಕ್ಸ್ ಹತ್ತಿರ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯುತ್ತಿದ್ದರು.
ಈ ವೇಳೆ ಅಲ್ಲಿಗೆ ಬಂದ ಆರೋಪಿ ಶಿವು ಅಲಿಯಾಸ್ ಮಾರಗೊಂಡನಹಳ್ಳಿ ಶಿವ ನಾನು ಸಿವಿಲ್ ಬಟ್ಟೆಯಲ್ಲಿರುವ ಪೊಲೀಸ್. ತಮ್ಮನ್ನ ಒಂದು ಅಪರಾಧ ಪ್ರಕರಣದ ಬಗ್ಗೆ ವಿಚಾರಣೆಗೆ ಒಳಪಡಿಸಬೇಕು. ನನ್ನ ಜೊತೆ ಪೊಲೀಸ್ ಠಾಣೆಗೆ ಬನ್ನಿ ಎಂದು ಕುಮಾರ್ ತಂದಿದ್ದ ದ್ವಿಚಕ್ರವಾಹನದ ಕೀ ಪಡೆದು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದ. ನಂತರ ಕುಮಾರ್ ಅವರಿಗೆ ಚಾಕು ತೋರಿಸಿ ಚಿನ್ನ ಮತ್ತು ದ್ವಿಚಕ್ರವಾಹನವನ್ನು ದರೋಡೆ ಮಾಡಿ ಪರಾರಿಯಾಗಿದ್ದ. ಬಳಿಕ ಹೊಳೆನರಸೀಪುರ ನಗರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು.