ಹಾಸನ: ಮಾರ್ಚ್ 21ರಿಂದ ಸುಮಾರು 46 ದಿನಗಳ ಕಾಲ ಲಾಕ್ಡೌನ್ ಆಗಿದ್ದ ನಗರವು ಇಂದಿನಿಂದ ಯಥಾಸ್ಥಿತಿಗೆ ಬರಲಿದೆ. ಹಸಿರು ವಲಯವಾಗಿಯೇ ಉಳಿದುಕೊಂಡಿದ್ದ ಜಿಲ್ಲೆಗೆ ಇಂದಿನಿಂದ ಮತ್ತಷ್ಟು ಸಡಿಲಿಕೆ ದೊರೆಯಲಿದ್ದು, ನಾಗರಿಕರ ಮತ್ತು ವ್ಯಾಪಾರಸ್ಥರ ಮೊಗದಲ್ಲಿ ಮಂದಹಾಸ ಮೂಡುತ್ತಿದೆ.
ಎಂದಿನಂತೆ ಇಂದು ಜನಜಂಗುಳಿಯ ನಡುವೆ ವ್ಯಾಪಾರ ವಹಿವಾಟು ಚುರುಕಾಗಿತ್ತು. ಕಣ್ಣು ಹಾಯಿಸಿದ ಕಡೆಯಲ್ಲೆಲ್ಲಾ ಜನರು ಮತ್ತು ವಾಹನ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಎರಡು ತಿಂಗಳಿಂದ ಸಲೂನ್ ಅಂಗಡಿ ತೆರೆದಿರದ ಹಿನ್ನೆಲೆಯಲ್ಲಿ ಹೇರ್ ಕಟಿಂಗ್ ಮಾಡಿಸಿಕೊಳ್ಳಲು ಸಾಕಷ್ಟು ಮಂದಿ ಬಂದಿದ್ದರು.
ಇನ್ನು ವಾರದಲ್ಲಿ ಮೂರು ದಿನ ಅಂದ್ರೆ ಮಂಗಳವಾರ, ಗುರುವಾರ ಮತ್ತು ಶನಿವಾರ ವ್ಯಾಪಾರ ವಹಿವಾಟು ನಡೆಸುವಂತೆ ಅವಕಾಶ ನೀಡಿದ್ದರಿಂದ ಹಾಸನ ಸೇರಿದಂತೆ ಅರಸೀಕೆರೆ, ಸಕಲೇಶಪುರ, ಅರಕಲಗೂಡು, ಚನ್ನರಾಯಪಟ್ಟಣ, ಹೊಳೆನರಸೀಪುರ, ಬೇಲೂರು, ಆಲೂರು ಗಳಲ್ಲಿಯೂ ವ್ಯಾಪಾರ ಜೋರಾಗಿತ್ತು. ಜನರು ಅಗತ್ಯ ವಸ್ತುಗಳನ್ನು ಕೊಳ್ಳಲು ಮುಗಿಬಿದ್ದಿದ್ದರು. ವಾಹನ ಸಂಚಾರ ದಟ್ಟಣೆಯೂ ಹೆಚ್ಚಾಗಿತ್ತು.
ಇವತ್ತಿನಿಂದ ಸಾರ್ವಜನಿಕರು ಜಿಲ್ಲಾಡಳಿತದ ನಿಯಮಗಳನ್ನು ಪಾಲಿಸುವ ಮೂಲಕ ಜಿಲ್ಲೆಯಲ್ಲಿದ್ದ ಹಸಿರು ವಲಯವನ್ನು ಮುಂದುವರೆಸಿಕೊಂಡು ಹೋಗುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕೂಡಾ ಮನವಿ ಮಾಡಿದರು.