ಹಾಸನ: ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ನಕಲು ತಡೆಯಲು ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸುವಂತೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಹಾಸನದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಸೂಚನೆ ನೀಡಿದೆ.
ಚನ್ನರಾಯಪಟ್ಟಣ ತಾಲೂಕಿನ ನೊಂದ ಪ್ರೌಢ ಶಾಲಾ ಶಿಕ್ಷಕ ಶಿವಕುಮಾರ್ ಎಂಬವರು ಶಿಕ್ಷಣ ಇಲಾಖೆಗೆ ನೀಡಿದ ದೂರಿನ ಮೇರೆಗೆ ಸೂಚನೆ ನೀಡಲಾಗಿದೆ. 'ಕಳೆದ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹಾಸನ ಪ್ರಥಮ ಸ್ಥಾನ ಬರುವ ಸಲುವಾಗಿ ಹಿಂದಿನ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಂಜುನಾಥ್ ಅವರು ಮಕ್ಕಳಿಗೆ ನಕಲು ಮಾಡಲು ಮೌಖಿಕವಾಗಿ ಆದೇಶ ನೀಡಿದ್ದರು. ಚನ್ನರಾಯಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ಪುಷ್ಪವತಿ ನಕಲು ಮಾಡಿಸಲು ಸಹಕರಿಸಿದ್ದರು’ ಎಂದು ಚನ್ನರಾಯಪಟ್ಟಣ ತಾಲೂಕಿನ ಪ್ರೌಢ ಶಾಲಾ ಶಿಕ್ಷಕ ಶಿವಕುಮಾರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಅಲ್ಲದೇ, ಹಾಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮನಾಥ್ ಸ್ಥಳೀಯರಾಗಿದ್ದು, ಹೆಚ್ಚಿನ ನಕಲು ನಡೆಯುವ ಸಾಧ್ಯತೆ ಇದೆ. ಹೀಗಾಗಿ ಎಲ್ಲ ಕಡೆ ಸಿಸಿಟಿವಿ ಕ್ಯಾಮರಾ ಅಳವಡಿಸಬೇಕು. ಸಮರ್ಥ ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದು ಶಿವಕುಮಾರ್ ಮನವಿ ಮಾಡಿದ್ದಾರೆ. ಶಿವಕುಮಾರ್ ದೂರು ಆಧರಿಸಿ ಪತ್ರ ಬರೆದಿರುವ ಮಂಡಳಿಯ ಹಿರಿಯ ಸಹಾಯಕ ನಿರ್ದೇಶಕ ಬಿ.ಹೆಚ್.ಶೇಖರಪ್ಪ, ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.
ಈ ಸಂಬಂಧ ಸುದ್ದಿಗೋಷ್ಠಿ ನಡೆಸಿರುವ ಹಾಸನದ ಸಾರ್ವಜನಿಕ ಶಿಕ್ಷಣ ಸಂಸ್ಥೆ ಉಪ ನಿರ್ದೇಶಕ (ಡಿಡಿಪಿಐ) ಕೆ.ಎಸ್.ಪ್ರಕಾಶ್, ಕಳೆದ ಸಾಲಿನ ಪರೀಕ್ಷೆ ವೇಳೆ ಜಿಲ್ಲೆಯಲ್ಲಿ ಸಾಮೂಹಿಕ ನಕಲು ನಡೆದಿಲ್ಲ. ಇದು ದುರುದ್ದೇಶಪೂರಿತ ದೂರು. ಶಿಕ್ಷಣ ಇಲಾಖೆಗೆ ದೂರು ನೀಡಿರುವ ಶಿವಕುಮಾರ್ ಎಂಬವರು ತಮ್ಮ ವಿಳಾಸವನ್ನು ಸ್ಪಷ್ಟವಾಗಿ ಬರೆದಿಲ್ಲ. ಹಾಗಾಗಿ ಅವರು ಯಾರು ಎಂಬುದು ಗೊತ್ತಿಲ್ಲ. ಈ ಬಾರಿಯೂ ಸೂಕ್ತ ಭದ್ರತೆ ನಡುವೆ ಪರೀಕ್ಷೆ ನಡೆಯಲಿದೆ ಎಂದು ಹೇಳಿದ್ದಾರೆ.