ಹಾಸನ : ಕೋವಿಡ್ ಪ್ರಕರಣಗಳ ಪ್ರಮಾಣಕ್ಕನುಗುಣವಾಗಿ ನಾಳೆಯಿಂದ ರಾಜ್ಯದ ಹಲವು ಜಿಲ್ಲೆಗಳು ಅನ್ಲಾಕ್ ಆಗುವ ಜೊತೆಜೊತೆಯಲ್ಲಿಯೇ ಕೆಲ ಜಿಲ್ಲೆಗಳು ಮತ್ತೆ ಲಾಕ್ ಆಗಲಿವೆ. ಹಾಸನದಲ್ಲಿ ಮತ್ತೆ ಒಂದು ವಾರ ಲಾಕ್‌ಡೌನ್ ಮುಂದುವರೆಸಲಾಗಿದೆ. ಕೋವಿಡ್ ಪಾಸಿಟಿವಿಟಿ ರೇಟ್ ಹೆಚ್ಚಾಗಿದ್ದು, ಸಾವಿನ ಪ್ರಮಾಣವು ಕೂಡ ಹೆಚ್ಚಾಗಿರುವ ಹಿನ್ನೆಲೆ ಸರ್ಕಾರದ ನಿರ್ದೇಶನದಂತೆ ಜಿಲ್ಲಾಡಳಿತ ಲಾಕ್‌ಡೌನ್ ಮುಂದುವರೆಸಿದೆ.
ಹಾಸನದಲ್ಲಿ ಈಗಾಗಲೇ ಸುಮಾರು 50ಕ್ಕೂ ಹೆಚ್ಚು ಕೋವಿಡ್ ಕೇರ್ ಕೇಂದ್ರಗಳನ್ನು ಜಿಲ್ಲಾ ಮಟ್ಟದಲ್ಲಿ ನಿರ್ಮಾಣ ಮಾಡಲಾಗಿದೆ. ಇದು ರಾಜ್ಯದಲ್ಲಿಯೇ ಮೊದಲು. ಈಗಾಗಲೇ ಸಿಸಿಸಿಗಳಲ್ಲಿ 5 ಸಾವಿರಕ್ಕೂ ಅಧಿಕ ಮಂದಿ ಚಿಕಿತ್ಸೆ ಪಡೆದಿದ್ದರೆ, 2 ಸಾವಿರಕ್ಕೂ ಅಧಿಕ ಮಂದಿ ಗುಣಮುಖರಾಗಿ ಹೊರ ಬಂದಿದ್ದಾರೆ. ಅರಕಲಗೂಡಿನ ಕೊಣನೂರಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಕೋವಿಡ್ ಆರೈಕೆ ಕೇಂದ್ರವನ್ನಾಗಿ ಪರಿವರ್ತನೆ ಮಾಡಿ ಅಲ್ಲಿಯೂ ಕೂಡ ಚಿಕಿತ್ಸೆ ನೀಡಲಾಗುತ್ತಿದೆ.
ವಾರದಲ್ಲಿ ಮೂರು ದಿನ ಬೆಳಗ್ಗೆ 6 ರಿಂದ 10 ಗಂಟೆ ತನಕ ವ್ಯಾಪಾರ, ವಹಿವಾಟಿಗೆ ಅವಕಾಶ ನೀಡಲಾಗಿದೆ. ಈ ಸಂದರ್ಭದಲ್ಲಿ ಏಕಕಾಲಕ್ಕೆ ಹೆಚ್ಚು ಜನ ಸೇರುವುದು ಸೋಂಕಿತರ ಸಂಖ್ಯೆ ಹೆಚ್ಚಾಗಲು ಕಾರಣ ಎಂಬುದು ಜನಸಾಮಾನ್ಯರ ಮಾತಾಗಿದೆ.
ಕೋವಿಡ್ ತಡೆಗೆ ಕಠಿಣ ಕ್ರಮ : ಇನ್ನು, ಹಾಸನದಲ್ಲಿ ಶೇ.15ರಷ್ಟು ಕೋವಿಡ್ ಪಾಸಿಟಿವಿಟಿ ದರ ಇರುವುದರಿಂದ ಲಾಕ್‌ಡೌನ್ ತೆರವುಗೊಳಿಸಲು ಸಾಧ್ಯವಾಗಿಲ್ಲ. ಈಗಾಗಲೇ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಸಭೆ ನಡೆದಿದೆ. ನಾಳೆಯಿಂದ ಮತ್ತೆ ಒಂದು ವಾರಗಳ ಕಾಲ ಕಠಿಣ ಕ್ರಮ ಜರುಗಿಸಲು ನಿರ್ಧರಿಸಲಾಗಿದೆ. ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ಈಗಾಗಲೇ ನಿಯಮ ಉಲ್ಲಂಘಿಸಿದ ಸುಮಾರು ಎಂಟು ಸಾವಿರಕ್ಕೂ ಅಧಿಕ ವಾಹನಗಳನ್ನು ವಶಕ್ಕೆ ಪಡೆದು ದಂಡ ವಸೂಲಿ ಮಾಡಲಾಗಿದೆ. ಸುಮಾರು 350ಕ್ಕೂ ಹೆಚ್ಚು ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ಹೊಸಪೇಟೆ: ತನಗೆ ಕಚ್ಚಿದ ನಾಗರಹಾವನ್ನೇ ಜೀವಂತವಾಗಿ ಹಿಡಿದು ಆಸ್ಪತ್ರೆಗೆ ಬಂದ ವ್ಯಕ್ತಿ!
ಈಗಾಗಲೇ ಹಾಸನದಲ್ಲಿ 20 ಬ್ಲ್ಯಾಕ್ ಫಂಗಸ್ ಸೋಂಕಿತರು ಹಿಮ್ಸ್ನಲ್ಲಿ ಚಿಕಿತ್ಸೆ ಪಡೆದಿದ್ದು, ಇದರಲ್ಲಿ ಮೂರು ಮಂದಿ ಸಾವಿಗೀಡಾಗಿದ್ದಾರೆ. ಸದ್ಯ 16 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಓರ್ವರು ಗುಣಮುಖರಾಗಿದ್ದಾರೆ. ಇನ್ನು ನಾಳೆಯಿಂದ ಮತ್ತೆ ಒಂದು ವಾರಗಳ ಕಾಲ ಲಾಕ್‌ಡೌನ್ ಮುಂದುವರೆಯುವ ಹಿನ್ನೆಲೆ, ಪಾಸಿಟಿವಿಟಿ ದರ ಕಡಿಮೆ ಮಾಡಲು ಜಿಲ್ಲಾಡಳಿತ ಪ್ರಯತ್ನಿಸುತ್ತಿದೆ. ಸುಖಾಸುಮ್ಮನೆ ಓಡಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಜಿಲ್ಲಾಡಳಿತ ಸಜ್ಜಾಗಿದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಮಾಹಿತಿ ನೀಡಿದರು.