ಹಾಸನ: ಜಿಲ್ಲೆಯಲ್ಲಿ ಕೊರೊನಾ ಏರುಗತಿಯಲ್ಲಿದ್ದರೂ ಸಾವಿನ ಸಂಖ್ಯೆ ಇಂದು ತಗ್ಗಿದೆ. ಮಂಗಳವಾರ ಇಬ್ಬರು ಸಾವನ್ನಪ್ಪಿದ್ದು, 206 ಮಂದಿಗೆ ಸೋಂಕು ದೃಢಪಟ್ಟಿದೆ. ಹೀಗಾಗಿ ಒಟ್ಟು ಮೃತರ ಸಂಖ್ಯೆ 167ಕ್ಕೆ ಏರಿದಂತಾಗಿದ್ದು, ಸೋಂಕಿತರ ಸಂಖ್ಯೆ ಒಟ್ಟು 6378ಕ್ಕೆ ಜಿಗಿದಿದೆ ಎಂದು ಆರೋಗ್ಯಾಧಿಕಾರಿ ಅಧಿಕಾರಿ ಡಾ. ಕಾಂತರಾಜ್ ತಿಳಿಸಿದ್ದಾರೆ.
ಇಂದು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ 144 ಇದೆ. ತುರ್ತು ನಿಗಾ ಘಟಕ (ಐಸಿಯು)ದಲ್ಲಿ ಇರುವ 57 ಮಂದಿ ಸೇರಿದಂತೆ ಒಟ್ಟು 1970 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಣಮುಖರಾಗಿ ಬಿಡುಗಡೆಯಾದವರ ಸಂಖ್ಯೆ 4241 ಇದೆ. ಹೀಗಾಗಿ ಗುಣಮುಖರಾದವರ ಸಂಖ್ಯೆಯೇ ಹೆಚ್ಚಾಗಿರುವುದು ಸಮಾಧಾನಕರ ವಿಷಯವಾಗಿದೆ ಎಂದರು.
ಇಂದು ಬೇಲೂರು ಹಾಗೂ ಚನ್ನರಾಯಪಟ್ಟಣ ತಾಲೂಕುಗಳಲ್ಲಿ ತಲಾ ಒಬ್ಬರಂತೆ ಇಬ್ಬರು ಹಿಮ್ಸ್ ಆಸ್ಪತ್ರೆಯಲ್ಲಿ ಅಸು ನೀಗಿದ್ದಾರೆ. ಇವರು ಜ್ವರ ಹಾಗೂ ಸಾಮಾನ್ಯ ಉಸಿರಾಟದ ತೊಂದರೆಯಿಂದ ಕೋವಿಡ್‌ಗೆ ಬಲಿಯಾಗಿದ್ದಾರೆ ಎಂದು ವಿವರಿಸಿದರು.
ಹಾಸನ ತಾಲೂಕಿನಲ್ಲಿ ಮೃತಪಟ್ಟವರ ಸಂಖ್ಯೆ 62 ಇದ್ದು, ಇಂದು ಅತ್ಯಧಿಕ ಅಂದರೆ 82 ಸೋಂಕಿತರು ಪತ್ತೆಯಾಗಿದ್ದು, ಒಟ್ಟು 2569 ಪ್ರಕರಣಗಳು ವರದಿಯಾಗಿವೆ. ಇಂದು ತಾಲೂಕಿನಲ್ಲಿ 30 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೆ ಆಸ್ಪತ್ರೆಯಿಂದ 1680 ರೋಗಿಗಳು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ತಾಲೂಕಿನಲ್ಲಿ 827 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಆಲೂರು-10, ಅರಕಲಗೂಡು-17, ಅರಸೀಕೆರೆ-38, ಬೇಲೂರು-22, ಚನ್ನರಾಯಪಟ್ಟಣ-26, ಹೊಳೆನರಸೀಪುರ-8 ಹಾಗೂ ಸಕಲೇಶಪುರ-2 ಮತ್ತು ಇತರ ಜಿಲ್ಲೆಗೆ ಸೇರಿದ 1 ಸೋಂಕಿತರು ಪತ್ತೆಯಾಗಿದ್ದಾರೆ.