ಹಾಸನ: ದಲಿತ ವ್ಯಕ್ತಿಯೊಬ್ಬನ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿರುವ ಘಟನೆ, ಜಿಲ್ಲೆಯ ಸಕಲೇಶಪುರ ತಾಲೂಕಿನ ಹಾನುಬಾಳು ಹೋಬಳಿಯ ಹುಲ್ಲೆಮನೆ ಗ್ರಾಮದಲ್ಲಿ ನಡೆದಿದೆ.
ಮೂರ್ತಿ ಹಲ್ಲೆಗೊಳಗಾದ ವ್ಯಕ್ತಿ, ಇವರ ಗ್ರಾಮದ ಸಮೀಪವೇ ಸರ್ಕಾರದ ದೀಣೆಯಿದೆ (ಬೆಟ್ಟದ ಪ್ರದೇಶದಲ್ಲಿರುವ ಅರಣ್ಯ ಭಾಗ) ಇದಕ್ಕೆ ಬೆಂಕಿ ಬಿದ್ದಿತ್ತು ಎನ್ನಲಾಗಿದ್ದು, ಮಾಹಿತಿ ಆಧರಿಸಿ ಸ್ಥಳಕ್ಕೆ ಭೇಟಿ ನೀಡಿದ್ದ ಅರಣ್ಯ ರಕ್ಷಕರು ಬೆಂಕಿ ನಂದಿಸುವ ಯತ್ನ ಮಾಡಿದ್ದಾರೆ. ಈ ವೇಳೆ, ಮನೆಯಿಂದ ಇದೇ ದಾರಿಯಲ್ಲಿದ್ದ ತನ್ನ ಗದ್ದೆಯ ಕಡೆ ತೆರಳಿದ್ದ ಮೂರ್ತಿಯನ್ನು ತಡೆದು ಬೆಂಕಿ ಹಾಕಿರುವುದಾಗಿ ಆತನ ಮೇಲೆ ಆರೋಪಿಸಲಾಗಿದೆ. ಬಳಿಕ ಆತನನ್ನು ಇಬ್ಬರು ರಕ್ಷಕರು ಸೇರಿ 6 ಮಂದಿಯ ಗುಂಪು ಮೂರ್ತಿಯನ್ನು ಮರಕ್ಕೆ ಕಟ್ಟಿ ಹಾಕಿ ಹೊಡೆದಿದ್ದಾರೆ. ಅಲ್ಲದೇ ಜಾತಿ ನಿಂದನೆ ಮಾಡಿದ್ದಾರೆ ಎಂದು ಮೂರ್ತಿ ತಿಳಿಸಿದ್ದಾನೆ.
ಮೂರ್ತಿ ಮೇಲೆ ಹಲ್ಲೆ ನಡೆಸಿದ ಹಿನ್ನಲೆ ಮೈತುಂಬಾ ಬಾಸುಂಡೆಗಳು ಬಂದಿದ್ದು, ಸದ್ಯ ಆತನನ್ನು ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಅರಣ್ಯ ರಕ್ಷಕರನ್ನ ಒಳಗೊಂಡಂತೆ ಹುಲ್ಲೆಮನೆಯ ಗಂಗರಾಜುಗೌಡ, ಸೋಮೇಗೌಡ, ಸ್ವಾಮಿ, ಲೋಕೇಶ್ ಎಂಬುವವರ ವಿರುದ್ಧ ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಸಿದ್ದಾರೆ.