ಹಾಸನ: ಒಂದು ಕಡೆ ಕೊರೊನಾ, ಮತ್ತೊಂದು ಕಡೆ ಉರಿ ಬಿಸಿಲಿನಿಂದ ಬಳಲಿ ಬೆಂಡಾಗಿದ್ದ ಜಿಲ್ಲೆಯ ಜನರಿಗೆ ವರುಣರಾಯ ತಂಪೆರೆದಿದ್ದಾನೆ.
ಜಿಲ್ಲೆಯಲ್ಲಿ ಸುರಿದ ಮಳೆಗೆ ಜನರು ಕೂಡ ಖುಷಿಯಾಗಿದ್ದಾರೆ. ಕೃಷಿ ಚಟುವಟಿಕೆ ಪ್ರಾರಂಭಿಸುವ ಮಳೆ ಆಗದಿದ್ದರೂ ಕೃಷಿ ಭೂಮಿಯನ್ನು ಹದ ಮಾಡುವಷ್ಟು ಮಳೆಯಾಗಿದ್ದು ತೃಪ್ತಿ ತಂದಿದೆ. ಸಂಜೆ ಸುರಿದ ಮಳೆಯಿಂದ ನಗರ ಪ್ರದೇಶದಲ್ಲಿ ಚರಂಡಿಗಳು ಸಂಪೂರ್ಣವಾಗಿ ತುಂಬಿ ಹರಿದಿವೆ. ಹಾಸನ ನಗರದ ಪೆನ್ಷನ್ ಮೊಹಲ್ಲಾ ಸಮೀಪದ ರಾಜಕುಮಾರ್ ಬಡಾವಣೆಯಲ್ಲಿ ಮನೆಯೊಂದಕ್ಕೆ ಚರಂಡಿ ನೀರು ನುಗ್ಗಿದ ಹಿನ್ನೆಲೆಯಲ್ಲಿ ಅವಾಂತರವೇ ಸೃಷ್ಟಿಯಾಗಿತ್ತು.
ಚರಂಡಿ ನೀರು ಮನೆಯೊಳಗೆ ನುಗ್ಗಿದ್ದರಿಂದ ಕುಟುಂಬಸ್ಥರು ನಗರಸಭೆಗೆ ಹಿಡಿಶಾಪ ಹಾಕಿದರು. ಪ್ರತಿ ಬಾರಿಯೂ ಇದೇ ಥರ ನರಕಯಾತನೆ ಅನುಭವಿಸುವಂತಾಗಿದೆ. ಯಾವೊಬ್ಬ ಅಧಿಕಾರಿಯೂ ಚರಂಡಿಯನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾಗಿಲ್ಲ. ಹೀಗಾಗಿ ನಮ್ಮಂತಹವರ ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿ ವಾಸವಿರಲು ಸಾಧ್ಯವಾಗದಷ್ಟು ತೊಂದರೆ ಅನುಭವಿಸುತ್ತಿದ್ದೇವೆ ಎಂದು ಆಕ್ರೋಶ ಹೊರ ಹಾಕಿದರು.