ಹಾಸನ (ಅರಸೀಕೆರೆ): ನಾವು ಎಷ್ಟೇ ಪರಿಹಾರ ಕೊಟ್ಟರೂ ಕುಟುಂಬದವರನ್ನು ಮತ್ತೆ ಬದುಕಿಸಲು ಸಾಧ್ಯವಿಲ್ಲ. ಆದರೆ ಈ ದುರಂತಕ್ಕೆ ಕಾರಣರಾಗಿರುವವರಿಗೆ ತಕ್ಕ ಶಿಕ್ಷೆಯಾಗುತ್ತದೆ. ಕುಟುಂಬಕ್ಕೆ ಸರ್ಕಾರದಿಂದ ಸಿಗಬೇಕಾದ ಪರಿಹಾರ ದೊರಕಿಸಿ ಕೊಡುವ ಪ್ರಯತ್ನ ಮಾಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ ಗೋಪಾಲಯ್ಯ ತಿಳಿಸಿದರು.
ಜಿಲ್ಲೆಯ ಬಾಣಾವರ ಬಳಿ ಇಂದು ಬೆಳಿಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಅಪಘಾತಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯವೇ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಮೃತ ಕುಟುಂಬಕ್ಕೆ ಈಗಾಗಲೇ ಸಾಂತ್ವನ ಹೇಳಿದ್ದು, ಪರಿಹಾರ ನೀಡುವ ಸಂಬಂಧ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಲಾಗುವುದು. ಸದ್ಯ ತಲಾ ಎರಡು ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಹೇಳಿದರು.
ಇದು ಆಘಾತಕಾರಿ ವಿಷಯ. ತಮ್ಮ ಕುಟುಂಬಗಳಿಗೆ ಬೆಳಕಾಗಬೇಕಿದ್ದ 5 ಮಕ್ಕಳು ಸಾವನ್ನಪ್ಪಿರುವುದು ಮನಸ್ಸಿಗೆ ತುಂಬಾ ವೇದನೆಯ ವಿಷಯ. ಇಂಥಹ ಕಷ್ಟ ಯಾರಿಗೂ ಬರಬಾರದು. ಈ ಕುಟುಂಬಗಳಿಗೆ ಸರ್ಕಾರ ಸ್ಪಂದಿಸುವ ಸಲುವಾಗಿ ಮೃತರ ಕುಟುಂಬಸ್ಥರಿಗೆ ತಲಾ 2 ಲಕ್ಷ ರೂ. ನೀಡಲಾಗುವುದು ಎಂದು ಹೇಳಿದರು.
ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳಿಗೂ ಕೂಡ ಪರಿಹಾರ ನೀಡುವ ಸಂಬಂಧ ಇಂದಿನ ಸಭೆಯಲ್ಲಿ ಚರ್ಚೆ ನಡೆಸಲಾಗುವುದು. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ನಿರ್ಲಕ್ಷ್ಯದಿಂದ ದೊಡ್ಡ ಅಪಘಾತವಾಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ಕುರಿತು ನಾಳೆ ಅಧಿಕಾರಿಗಳ ಸಭೆ ಕರೆದು ಕಟ್ಟುನಿಟ್ಟಾಗಿ ಸೂಚನೆ ನೀಡಲಾಗುವುದು ಎಂದರು. ಈ ವೇಳೆ ಶಾಸಕ ಶಿವಲಿಂಗೇಗೌಡ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ : ಹಾಸನ ಬಳಿ ಭೀಕರ ಅಪಘಾತಕ್ಕೆ 9 ಮಂದಿ ಸಾವು: 5-6 ಕಿಮೀ ಸಾಗಿದ್ರೆ ಮನೆ ಸೇರ್ತಿದ್ದ ಕುಟುಂಬದ ಮೇಲೆ ಜವರಾಯನ ಅಟ್ಟಹಾಸ