ಹಾಸನ : ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಪಾಂಚಜನ್ಯ (ಆರ್ಎಸ್ಎಸ್) ಕಾರ್ಯಾಲಯದಲ್ಲಿ ಪರಿಸರ ಸ್ನೇಹಿ ಮಹಾಗಣಪತಿಯನ್ನು ಪ್ರತಿಷ್ಠಾಪನೆ ಮಾಡಿದ್ದು, ಕೊನೆಯ ದಿವಸವಾದ ಬುಧವಾರ ಮಹಾಗಣಪತಿ ನಿಮಜ್ಜನ ಮಹೋತ್ಸವ ಅದ್ದೂರಿಯಾಗಿ ಜರುಗಿತು. ಗಣೇಶ ಮೆರವಣಿಗೆಯಲ್ಲಿ ದೇಶಭಕ್ತಿ ಮೂಡಿಸುವ ಸ್ತಬ್ಧಚಿತ್ರಗಳು ಹಾಗೂ ಕೇಸರಿ ಭಾವುಟಗಳು ಸಾರ್ವಜನಿಕರನ್ನು ಆಕರ್ಷಿಸಿದವು.
ನಗರದ ಜಿಲ್ಲಾ ಗ್ರಂಥಾಲಯ ಹಿಂಭಾಗ ಪಾಂಚಜನ್ಯದಲ್ಲಿ ಇಡಲಾಗಿದ್ದ ಮಹಾಗಣಪತಿಯ ಭವ್ಯ ಮೆರವಣಿಗೆಯಲ್ಲಿ ಸಾಂಸ್ಕೃತಿಕ ಕಲಾ ತಂಡಗಳಾದ ಮಹಾಪುರುಷರ ಸ್ತಬ್ಧಚಿತ್ರಗಳು, ಮಂಗಳವಾದ್ಯ, ಮಕ್ಕಳಿಂದ ಮಹಾಪುರುಷರ ವೇಷಭೂಷಣ ಹಾಗೂ ನಾಸೀಕ್ ಡೋಲ್, ನಂದಿ ಕುಣಿತ, ಸಂಗೀತ ಹಾಗೂ ಇವುಗಳನ್ನೊಳಗೊಂಡು ವಿವಿಧ ಆಕರ್ಷಕ ಮೆರವಣಿಗೆ ನಗರದ ಪ್ರಮುಖ ರಾಜ ಬೀದಿಗಳಲ್ಲಿ ಸಂಚರಿಸಿತು. ಸಾವಿರಾರು ಜನರು ಮೆರವಣಿಗೆಯಲ್ಲಿ ಪಾಲ್ಗೊಂಡು ಭಾರತ ಮಾತೆಗೆ ಹಾಗೂ ಕರ್ನಾಟಕ ಮಾತೆಗೆ ಜೈಕಾರ ಹಾಕಿದರಲ್ಲದೇ ಆರ್.ಎಸ್.ಎಸ್. ಸಂಘ ಪರಿವಾರ ಹಾಗೂ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಮ್ ಜೆ. ಗೌಡ, ಶ್ರೀ ಮಹಾಗಣಪತಿ ಸೇವಾ ಸಮಿತಿ ಸಂಚಾಲಕ ಪಾರಸ್ ಮಲ್, ಕಲಾವತಿಮಧುಸೂದನ್, ನವೀನ್ ಕುಮಾರ್, ರವಿಸೋಮು, ರಾಜವರ್ಧನ್, ಗೋಪಾಲಕೃಷ್ಣ ಸೇರಿದಂತೆ ಮುಖಂಡರು ಹಾಜರಿದ್ದರು.
ಆಕರ್ಷಣೆಯ ಮೆರವಣಿಗೆ : ನಗರದ ಪ್ರಮುಖ ರಾಜಬೀದಿಗಳಾದ ಅಗ್ರಹಾರ ಬೀದಿಯಿಂದ ಹೊರಟ ಮೆರವಣಿಗೆ ಮಹಾವೀರವೃತ್ತ, ಸಹ್ಯಾದ್ರಿ ವೃತ್ತ, ಅರಳೇಪೇಟೆ ರಸ್ತೆ, ಶ್ರೀ ಬಸವೇಶ್ವರ ಕಲ್ಯಾಣ ಮಂಟಪ, ಹೊಸಲೈನ್ ರಸ್ತೆ, ಡಬ್ಬಲ್ ಟ್ಯಾಂಕ್ ವೃತ್ತ, ವಲ್ಲಭಾಯಿ ರಸ್ತೆ, ಹಾಸನಾಂಬ ದೇವಸ್ಥಾನ, ಗಣಪತಿ ದೇವಸ್ಥಾನ, ಪಾಯಣ್ಣಛತ್ರ, ಗಾಂಧಿಬಜಾರ್ ವೃತ್ತ, ಸುಭಾಷ್ ಚೌಕ ಮೂಲಕ ಸಿಟಿ ಬಸ್‌ನಿಲ್ದಾಣ ಮುಂದೆ ಕಸ್ತೂರಬಾ ರಸ್ತೆ ಮೂಲಕ ದೇವಿಗೆರೆಯಲ್ಲಿ ನಿಮಜ್ಜನ ಮಾಡಲಾಯಿತು.
ಪೊಲೀಸ್ ಬಿಗಿ ಬಂದೂಬಸ್ತ್ : ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಪೊಲೀಸ್ ಅಧಿಕಾರಿಗಳು ನಗರದ ಅರಳೇಪೇಟೆ ರಸ್ತೆಯಲ್ಲಿರುವ ಎಂ.ಹೆಚ್. ಕನ್ವೆನ್ಷನ್ ಹಾಲ್‌ನಲ್ಲಿ ಹಾಜರಿದ್ದರಲ್ಲದೆ, ಗಣಪತಿ ಉತ್ಸವ ಮತ್ತು ವಿಸರ್ಜನೆ ಸಮಯದಲ್ಲಿ ಯಾವ ಅಹಿತಕರ ಘಟನೆಗೆ ಅವಕಾಶ ಕೊಡದಂತೆ ಬಿಗಿ ಭದ್ರತೆ ಒದಗಿಸಲಾಗಿತ್ತು.