ಹಾಸನ: ಅರಸೀಕೆರೆ ನಗರದಲ್ಲಿ 7 ಮನೆಗಳಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಅರಸೀಕೆರೆ ನಗರ ಪೊಲೀಸರು ಯಶಸ್ವಿಯಾಗಿದ್ದಾರೆಂದು ಎಎಸ್ಪಿ ನಂದಿನಿ ತಿಳಿಸಿದ್ದಾರೆ.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಸೀಕೆರೆ ನಗರದ ಹಾಸನ ರಸ್ತೆ 9ನೇ ಕ್ರಾಸ್‌ನಲ್ಲಿರುವ ಸಲ್ಮಾನ್ ಪಾಷಾ ಎಂಬುವರು ತಮ್ಮ ಮನೆಗೆ ಬೀಗ ಹಾಕಿಕೊಂಡು ಸಂಸಾರ ಸಮೇತ 2019 ಮಾರ್ಚ್19ರಂದು ಬೇಲೂರಿನ ತಮ್ಮ ಸಂಬಂಧಿಕರ ಮನೆಗೆ ಹೋಗಿದ್ದರು. ಎರಡು ದಿನಗಳ ಬಳಿಕ ವಾಪಸ್ ಮನೆಗೆ ಬಂದಾಗ ಯಾರೋ ಕಳ್ಳರು ತಮ್ಮ ಮನೆಯ ಮುಂಬಾಗಿಲ ಲಾಕ್ಅನ್ನು ಆಯುಧದಿಂದ ಮುರಿದು ಚಿನ್ನಾಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ಪ್ರಕರಣ ದಾಖಲು ಮಾಡಿದ್ದರು.
ಪೊಲೀಸ್ ಅಧೀಕ್ಷಕರ ನೇತೃತ್ವದಲ್ಲಿ ಆರಸೀಕೆರೆ ಉಪ ವಿಭಾಗದ ಡಿವೈಎಸ್ಪಿ ಎಲ್.ನಾಗೇಶ್ ಮತ್ತು ಅರಸೀಕೆರೆ ನಗರ ಪೊಲೀಸ್ ಠಾಣೆಯ ಪಿಎಸ್‌ಐ ಬಿ.ಚಂದ್ರಶೇಖರಯ್ಯ ಒಳಗೊಂಡಂತೆ ಒಂದು ತಂಡವನ್ನು ರಚಿಸಲಾಗಿತ್ತು. 2019ರ ಡಿ. 24ರಂದು ಆರೋಪಿ ಮತ್ತೆ ಕಾರ್ಯದಲ್ಲಿದ್ದಾಗ ಮಾಹಿತಿ ಆಧಾರಿಸಿ ಚಿತ್ರದುರ್ಗ ಜಿಲ್ಲೆಯ ಭದ್ರಾವತಿಯ ಸೀಗೆಬಾಗಿ ಸ್ಥಳದ ವಾಸಿ ಮೆಣಸಿನಕಾಯಿ ವ್ಯಾಪಾರ ಮಾಡುವ ದಾದಾಪೀರ್ ಉರ್ ಹುಸೇನಿ (48) ಎಂಬಾತನನ್ನು ಪೊಲೀಸ್ ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡಿದಾಗ ಸತ್ಯಾಂಶ ಹೊರ ಬಂದಿದೆ.
ಸುಮಾರು 4,50,000 ರೂ. ಮೌಲ್ಯದ 120 ಗ್ರಾಂ ಚಿನ್ನದ ಆಭರಣಗಳು ಮತ್ತು ಸುಮಾರು 500 ಗ್ರಾಂ ತೂಕದ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಕಾರ್ಯಾಚರಣೆಯಲ್ಲಿ ಅರಸೀಕೆರೆ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಬಿ.ಚಂದ್ರಶೇಖರಯ್ಯ, ಉಪ ಉಪನಿರೀಕ್ಷಕ ತಿಮ್ಮಯ್ಯ ಮತ್ತು ಪಿಎಸ್‌ಐ ಅರುಣ್, ಸಿಬ್ಬಂದಿ ಮಂಜೇಗೌಡ, ರಂಗಾಸ್ವಾಮಿ, ರಘು, ಶಶಿಧರ್, ಕುಮಾರ್, ಸಿದ್ದೇಶ್, ಹರೀಶ್, ಕೀರ್ತಿಕುಮಾರ್, ಶಿವಕುಮಾರ್, ಉಷಾ, ಫೀರ್ ಖಾನ್ ಹಾಗೂ ಠಾಣೆಯ ಇತರೆ ಸಿಬ್ಬಂದಿ ಶ್ರಮಿಸಿದ್ದು, ಈ ಬಗ್ಗೆ ಪೊಲೀಸ್ ಅಧೀಕ್ಷಕ ರಾಮ್ ನಿವಾರ್ ಸೆಪಟ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ ಎಂದರು.