ಹಾಸನ: ಮನೆಗೆ ಕನ್ನ ಹಾಕಿ ಚಿನ್ನಾಭರಣ ದೋಚುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿ ಅವರಿಂದ 12.50 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಹಳೇಬೀಡು ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಎಸ್ಪಿ ಶ್ರೀನಿವಾಸಗೌಡ ತಿಳಿಸಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೇಲೂರು ತಾಲೂಕಿನ ಹನಿಕೆ ಗ್ರಾಮದ ಮಂಜುನಾಥ್ ಎಂಬುವರು 2021 ಅಕ್ಟೋಬರ್ 3 ರಂದು ತಮ್ಮ ಮನೆಗೆ ಬೀಗ ಹಾಕಿಕೊಂಡು ಪತ್ನಿ ಮೀನಾಕ್ಷಿಯೊಂದಿಗೆ ಮಗನನ್ನು ನೋಡಲು ಆಂಧ್ರಪ್ರದೇಶಕ್ಕೆ ಹೋಗಿದ್ದರು. 20 ದಿನಗಳ ನಂತರ ಮನೆಗೆ ವಾಪಸ್ ಬಂದಾಗ ಮೇಲ್ಛಾವಣಿಯ ಹಂಚು ತೆಗೆದು ಮನೆಯಲ್ಲಿದ್ದ ಸುಮಾರು 12.50 ಲಕ್ಷದ ಚಿನ್ನಾಭರಣ ಕಳವಾಗಿತ್ತು.
ಈ ಸಂಬಂಧ ಹಳೇಬೀಡು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿಗಳ ಪತ್ತೆಗೆ ತಂಡ ರಚನೆ ಮಾಡಿ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ಬಳಿಕ ಕಳವಾಗಿದ್ದ ಬೆಲೆಬಾಳುವ ಚಿನ್ನಾಭರಣ ಮತ್ತು ಬೆಳ್ಳಿ ವಸ್ತುಗಳನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದರು.
ಡೀಸೆಲ್ ಕಳ್ಳರ ಬಂಧನ: ಇನ್ನು ಡಿಸೇಲ್ ಕದಿಯುತ್ತಿದ್ದ ಅಂತಾರಾಜ್ಯ ಕಳ್ಳರನ್ನು ಸಹ ಬಂಧಿಸುವಲ್ಲಿ ಹಳೇಬೀಡು ಪೊಲೀಸರು ಯಶಸ್ವಿಯಾಗಿದ್ದಾರೆ. ಪಟ್ಟಣದ ಹೊಯ್ಸಳ ಬಡಾವಣೆಯ ಪರಮೇಶ್ ಎಂಬ ಟಿಪ್ಪರ್ ಮಾಲೀಕ ಆಗಸ್ಟ್ 16, 2021ರಂದು ತನ್ನ ವಾಹನಕ್ಕೆ ಡಿಸೇಲ್ ಹಾಕಿಸಿ ನಿಲ್ಲಿಸಿದ್ದರು. ಬೆಳಗ್ಗೆ ಡಿಸೇಲ್ ಸೋರಿಕೆಯಾಗಿರುವುದನ್ನು ಗಮನಿಸಿದಾಗ ಡಿಸೇಲ್ ಕಳ್ಳತನವಾಗಿದ್ದು ತಿಳಿದು ಬಂದಿದೆ.
ಇನ್ನು ಅದೇ ವಾಹನದ ಬಳಿ ಬೇರೊಂದು ಗೂಡ್ಸ್ ವಾಹನ ನಿಂತಿದ್ದು, ಅದರ ಬಳಿ ಹೋಗುವಷ್ಟರಲ್ಲಿ ಚಾಲಕ ರವಿ ಹಾಗೂ ಅಶೋಕ್ ಎಂಬಿಬ್ಬರು ಖದೀಮರು ಅಲ್ಲಿಂದ ವಾಹನದ ಜೊತೆಗೆ ಪರಾರಿಯಾಗಿದ್ದರು. ಈ ಬಗ್ಗೆ ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಮಾಡಿದಾಗ ಅಂತಾರಾಜ್ಯ ಡಿಸೇಲ್ ಕದಿಯುವ ಮೂವರು ಆರೋಪಿಗಳು ಶಿವಮೊಗ್ಗದಲ್ಲಿ ಪತ್ತೆಯಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ನಂದಿನಿ, ಹಳೇಬೀಡು ವೃತ್ತ ಪೊಲೀಸ್ ನಿರೀಕ್ಷಕ ಶ್ರೀಕಾಂತ್, ಅರಸೀಕೆರೆ ಉಪನಿರೀಕ್ಷಕ ನಾಗೇಶ್ ಇತರರು ಉಪಸ್ಥಿತರಿದ್ದರು.