ಹಾಸನ: ನಗರ ಮತ್ತು ಸುತ್ತ ಮುತ್ತ ಹಲವಾರು ಸಮಸ್ಯೆಗಳಿದ್ದರೂ ಗಮನಹರಿಸದ ಕ್ಷೇತ್ರದ ಶಾಸಕ ಪ್ರೀತಮ್ ಜೆ. ಗೌಡರ ವಿರುದ್ಧ ಜಿಪಂ ಉಪಾಧ್ಯಕ್ಷ ಹೆಚ್.ಪಿ. ಸ್ವರೂಪ್ ಕಿಡಿಕಾರಿದ್ದಾರೆ.
ತಮ್ಮ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರ ಕೊಠಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ಮತ್ತು ಸುತ್ತ ಮುತ್ತ ಹಲವಾರು ಸಮಸ್ಯೆಗಳನ್ನು ಜನತೆ ಕಾಣುತ್ತಿದ್ದಾರೆ. ಮಳೆ ಹೆಚ್ಚಾಗಿ ಕೆರೆ ಕಟ್ಟೆಗಳು ಒಡೆದು ರಸ್ತೆಗಳು ಹಾಳಾಗಿದ್ದರೇ, ಅಮೃತ ಯೋಜನೆಗಾಗಿ ಹಾಸನ ನಗರ ವ್ಯಾಪ್ತಿಯಲ್ಲಿ ರಸ್ತೆಗಳು ಹಾಳಾಗಿವೆ. ರಸ್ತೆ ಮಧ್ಯೆ ಇರುವ ಗುಂಡಿಗಳನ್ನು ಕೂಡ ಮುಚ್ಚದೇ ನಿತ್ಯ ಜನರು ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಇನ್ನು ಕಲಾಭವನದ ಎದುರು ಮಹಾರಾಜ ಪಾರ್ಕ್ ಬಳಿ ನಿರ್ಮಿಸಲಾಗುತ್ತಿರುವ ಪುಡ್ ಕೋರ್ಟ್ನಲ್ಲಿ ಅನ್ಯಾಯ ಎಸಗಿ ಭ್ರಷ್ಟಚಾರ ಮಾಡಲಾಗುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದರು.
ಕೊರೊನಾದಿಂದ ಸಾವನಪ್ಪುತ್ತಿರುವವವರ ಹೆಣ ಸುಡಲು ಕೂಡ ಬಿಟ್ಟಗೌಡನಹಳ್ಳಿ ಸ್ಮಶಾನದಲ್ಲಿ ಸಾಲಿನಲ್ಲಿ ನಿಂತು ಸಂಜೆವರೆಗೂ ಕಾಯಬೇಕಾಗಿದೆ. ಇಷ್ಟೆಲ್ಲ ಸಮಸ್ಯೆಗಳು ತಮ್ಮ ತವರೂರಲ್ಲೇ ಇದ್ದರೂ ಗಮನ ಕೊಡದೇ ಹಾಸನದ ಶಾಸಕರು ಸಮಸ್ಯೆ ಪರಿಹರಿಸಲು ಮುಂದಾಗದೇ ಶಿರಾ ಚುನಾವಣೆಯ ಪ್ರಚಾರದಲ್ಲಿ ಹಣ ಹಂಚಲು ಹೊರಟಿರುವುದು ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಿರಾದಲ್ಲಿ ಜೆಡಿಎಸ್ ಪಕ್ಷ ಪ್ರಬಲವಾಗಿದೆ ಜನರು ಎಂದು ಕೈಬಿಡುವುದಿಲ್ಲ ಎಂದು ಭರವಸೆ ವ್ಯಕ್ತಪಡಿಸಿದರು. ತಾಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿ ಕೆರೆ ಹೊಡೆದು ರಸ್ತೆ ಹಾಳಾಗಿ ಒಂದು ವರ್ಷಗಳೇ ಕಳೆದಿದೆ. ಈ ಬಗ್ಗೆ ಪರಿಶೀಲನೆ ಮಾಡಲು ಹೋಗುತ್ತಿದ್ದೇವೆ. ಕೂಡಲೇ ಶಾಸಕ ಪ್ರೀತಮ್ ಜೆ. ಗೌಡರು ಹಾಸನ ಕ್ಷೇತ್ರದ ಸಮಸ್ಯೆ ಬಗ್ಗೆ ಆಲಿಸಬೇಕು ಎಂದು ಸಲಹೆ ನೀಡಿದರು.