ಹಾಸನ: ಸರ್ಕಾರದ ಆದೇಶದಂತೆ ನಮಗೆ ಕೆಲಸ ನಿರ್ವಹಿಸಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ಗ್ರೇಡ್-2, ಗ್ರೂಪ್ ಡಿ ಹುದ್ದೆ ನೌಕರರು ಪ್ರಭಾರಿ ಜಿಲ್ಲಾ ಆರೋಗ್ಯಾಧಿಕಾರಿ ಕಾಂತರಾಜು ಅವರಿಗೆ ಮನವಿ ಸಲ್ಲಿಸಿದ್ರು.
ಆಸ್ಪತ್ರೆಯಲ್ಲಿ ಕಸ ಗುಡಿಸುವುದು, ಶೌಚಾಲಯ ಸ್ವಚ್ಛತೆ, ಕಸ ವಿಲೇವಾರಿ, ಬೆಡ್ ಶೀಟ್ ಒಗೆಸುವಂತಹ ಕೆಲಸ ಮಾಡಿಸುತ್ತಿರುವುದನ್ನು ವಿರೋಧಿಸಿ ಮನವಿ ಸಲ್ಲಿಸಲಾಯಿತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಸ್ಪತ್ರೆಯಲ್ಲಿ ಅಟೆಂಡೆಂಟ್ ಗ್ರೇಡ್-2, ಗ್ರೂಪ್ ಡಿ ಹುದ್ದೆಗಳಲ್ಲಿ ಆಯ್ಕೆಯಾದ ನೌಕರರನ್ನು ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳು ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಕ್ಲಿನಿಕಲ್ ಕಾರ್ಯಗಳ ಸಹಾಯಕ್ಕೆ ಮಾತ್ರ ಬಳಸಿಕೊಳ್ಳಲು ಸರ್ಕಾರದ ಆದೇಶವಿದೆ. ಆದರೆ ನಮ್ಮಿಂದ ನೈರ್ಮಲ್ಯ, ಶುಚಿತ್ವ, ಶೌಚಾಲಯ ಸ್ವಚ್ಛತೆ, ಕಸ ವಿಲೇವಾರಿಯಂತಹ ನಾನಾ ಕೆಲಸ ಮಾಡಿಸುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉನ್ನತ ಅಧಿಕಾರಿಗಳಿಗೆ ನ್ಯಾಯ ದೊರಕಿಸಿಕೊಡುವ ಕುರಿತು ಹಲವು ಮನವಿ ಪತ್ರಗಳನ್ನು ಸಲ್ಲಿಸಿದ್ದರೂ ಇಲ್ಲಿಯವರೆಗೆ ನಮಗೆ ನ್ಯಾಯ ದೊರಕಿಲ್ಲದಿರುವುದು ವಿಷಾದನೀಯ. ಡಿ ವೃಂದದಲ್ಲಿ ಒಟ್ಟು 57 ಹುದ್ದೆಗಳಿದ್ದು, ಪ್ರತಿ ಹುದ್ದೆಯ ಕರ್ತವ್ಯ ಮತ್ತು ಜವಾಬ್ದಾರಿಗಳು ಬೇರೆ ಬೇರೆಯಾಗಿರುತ್ತವೆ. ಈ ವಿಚಾರವಾಗಿ ಆರೋಗ್ಯ ಸಚಿವರನ್ನು ಭೇಟಿ ಮಾಡಿ ಈ ಸಮಸ್ಯೆ ಬಗೆಹರಿಸುವಂತೆ ಮನವಿ ಸಲ್ಲಿಸಿದ್ದೇವೆ ಎಂದು ನೌಕರರು ಹೇಳಿದರು.